ಮುಂಬೈ: ನಟಿ ಮತ್ತು ಸಾಮಾಜಿಕ ಮಾಧ್ಯಮ ಪ್ರಭಾವಿ 22 ವರ್ಷದ ಏಂಜೆಲ್ ರೈ ಅವರಿಗೆ ಇಮೇಲ್ ಮತ್ತು ಇನ್ಸ್ಟಾಗ್ರಾಮ್ ಮೂಲಕ ಅಪರಿಚಿತರು ಅಶ್ಲೀಲ ಸಂದೇಶ ಹಾಗೂ ಕೊಲೆ ಬೆದರಿಕೆಗಳನ್ನು ಹಾಕುತ್ತಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏಂಜಲ್ ರೈ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ 25 ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳಿದ್ದಾರೆ.ಅವರ ವೆಬ್ ಸರಣಿ ‘ಘೋಟಾಲಾ’ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದೇ ಸಂದರ್ಭ ಅವರಿಗೆ ಅಶ್ಲೀಲ ಹಾಗೂ ಕೊಲೆ ಬೆದರಿಕೆ ಸಂದೇಶಗಳು ಬರುತ್ತಿದೆ.
ಮಾರ್ಚ್ 22 ರಂದು ದಾಖಲಾಗಿರುವ ಎಫ್ಐಆರ್ ಪ್ರಕಾರ ಗೋರೆಗಾಂವ್ ಪಶ್ಚಿಮದಲ್ಲಿ ವಾಸಿಸುವ ರೈ ಅವರಿಗೆ ಮಾರ್ಚ್ 16 ರಂದು ಅಪರಿಚಿತ ವ್ಯಕ್ತಿಯಿಂದ ಅಶ್ಲೀಲ ಸಂದೇಶಗಳು ಮತ್ತು ಕೊಲೆ ಬೆದರಿಕೆ ಇರುವ ಇಮೇಲ್ ಬಂದಿದೆ. ಈ ಬೆದರಿಕೆಗಳಲ್ಲಿ ಜೀವಂತವಾಗಿ ಸುಟ್ಟುಹಾಕುತ್ತೇವೆ, ತುಂಡುಗಳಾಗಿ ಕತ್ತರಿಸಿ ಎಸೆಯುತ್ತೇವೆ ಎಂದು ಬರೆಯಲಾಗಿದೆ.
ಈ ಹಿಂದೆಯೂ ಇದೇ ರೀತಿಯ ಇಮೇಲ್ಗಳು ಬಂದಿವೆ ಎಂದು ಅವರು ಆರೋಪಿಸಿದ್ದಾರೆ. 2023ರ ಆಗಸ್ಟ್ ಮತ್ತು 2024ರ ಮಾರ್ಚ್ ನಡುವೆ ಆಕೆಗೆ ಇಮೇಲ್, ಇನ್ಸ್ಟಾಗ್ರಾಮ್ ಮತ್ತು ಇತರ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಅಶ್ಲೀಲ ಮತ್ತು ಬೆದರಿಕೆ ಸಂದೇಶಗಳು ಬಂದಿವೆ. ನನಗೆ ಹಲವಾರು ದಿನಗಳಿಂದ ಅಶ್ಲೀಲ ಸಂದೇಶಗಳು ಬರುತ್ತಿವೆ. ಕೊನೆಗೆ ನಾನು ಬೇಸತ್ತು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದೆ ಎಂದಿದ್ದಾರೆ.
ಮುಖ್ಯವಾಗಿ ನನ್ನ ಹೊಸ ವೆಬ್ ಸರಣಿ ‘ಘೋಟಲಾ’ದ ಟ್ರೇಲರ್ ಬಿಡುಗಡೆಯಾದ ನಂತರ ಆರೋಪಿಗಳು ನನಗೆ ಕೊಲೆ ಬೆದರಿಕೆಗಳನ್ನು ಕಳುಹಿಸಿದ್ದಾರೆ. ಆರಂಭದಲ್ಲಿ ನನಗೆ ಇನ್ಸ್ಟಾಗ್ರಾಮ್ನಲ್ಲಿ ಸಂದೇಶಗಳು ಬಂದವು. ನಾನು ಆ ಖಾತೆಗಳನ್ನು ಬ್ಲಾಕ್ ಮಾಡಿದೆ.
ಆದರೆ ಆರೋಪಿಗಳು ವಿವಿಧ ಖಾತೆಗಳಿಂದ ಸಂದೇಶಗಳನ್ನು ಕಳುಹಿಸುತ್ತಲೇ ಇದ್ದರು. ಕಳೆದ ಎರಡು ವರ್ಷಗಳಿಂದ ನಾನು ಅದನ್ನು ಸಹಿಸಿಕೊಂಡಿದ್ದೇನೆ. ನನಗೆ ಇದರಿಂದ ಬೇಸರವಾಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.