ಮಂಗಳೂರು: ವಿಶ್ವದ ಮಾಡೆಲಿಂಗ್ ಲೋಕಕ್ಕೆ ಮಂಗಳೂರಿನ ಕೊಡುಗೆ ದೊಡ್ಡದಿದೆ. ಇಲ್ಲಿಂದ ಫ್ಯಾಶನ್ ಲೋಕದಲ್ಲಿ ಮಿಂಚಿದವರು ಸಾಕಷ್ಟು ಮಂದಿ ಇದ್ದಾರೆ. ಮಾಡೆಲಿಂಗ್ ಮೂಲಕ ಸಾಧನೆ ಮಾಡಿ ಬಾಲಿವುಡ್, ಸ್ಯಾಂಡಲ್ ವುಡ್ನಲ್ಲೂ ಮಿಂಚಿದ್ದಾರೆ. ಇದೀಗ ಬಹರೈನ್ನಲ್ಲಿ ನಡೆಯುವ ಫ್ಯಾಶನ್ ಶೋಗೆ ಮಂಗಳೂರಿನ 7 ಯುವತಿಯರು ಆಯ್ಕೆಯಾಗಿದ್ದು, ಕಿರೀಟ ಗೆಲ್ಲುವ ನಿರೀಕ್ಷೆ ಹೊಂದಿದ್ದಾರೆ.
ಬಾಲಿವುಡ್ ನಟಿ ಐಶ್ವರ್ಯಾ ರೈ ಸೇರಿದಂತೆ ಹಲವು ಮಂಗಳೂರು ಮೂಲದ ಯುವತಿಯರು ಫ್ಯಾಶನ್ ಲೋಕದಲ್ಲಿ ಸಾಧನೆ ಮಾಡಿದ್ದಾರೆ. ಮಂಗಳೂರಿನಲ್ಲಿ ಯುವತಿಯರಲ್ಲಿ ಫ್ಯಾಶನ್ ಲೋಕದ ಬಗ್ಗೆ ಆಸಕ್ತಿ ಹೆಚ್ಚು. ಈ ಕಾರಣದಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚಾಗಿ ಮಂಗಳೂರು ಹುಡುಗಿಯರು ಕಾಣಿಸಿಕೊಳ್ಳುತ್ತಾರೆ. ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಫ್ಯಾಶನ್ ಶೋ ಸ್ಪರ್ಧೆಗೆ ಮಂಗಳೂರಿನ ಏಳು ಹುಡುಗಿಯರು ಆಯ್ಕೆಯಾಗಿದ್ದಾರೆ.
ಬಹರೈನ್ನಲ್ಲಿ ಪ್ರತಿ ವರ್ಷ ಕುಡ್ಲೋತ್ಸವ ಎಂಬ ಅದ್ಧೂರಿ ಕಾರ್ಯಕ್ರಮ ನಡೆಯುತ್ತದೆ. ಮಂಗಳೂರು ಮೂಲದವರು ನಡೆಸುವ ಈ ಕಾರ್ಯಕ್ರಮದಲ್ಲಿ ಫ್ಯಾಶನ್ ಶೋ ಕೂಡ ಒಂದು. ಈ ಬಾರಿ ಏಪ್ರಿಲ್ 4 ರಂದು ಬಹರೈನ್ನಲ್ಲಿ ಫ್ಯಾಶನ್ ಶೋ ನಡೆಯಲಿದೆ. ಈ ಫ್ಯಾಶನ್ ಶೋನಲ್ಲಿ ವಿದೇಶಗಳಲ್ಲಿ ನೆಲೆಸಿರುವ ಮಂಗಳೂರು ಮೂಲದ ಯುವತಿಯರು ಪಾಲ್ಗೊಳ್ಳಲಿದ್ದಾರೆ. ಇದರಲ್ಲಿ ಮಂಗಳೂರಿನ ವೆನ್ಜ್ ಮಾಡೆಲ್ನಲ್ಲಿ ತರಬೇತಿಗೊಂಡ 7 ಯುವತಿಯರು ಪಾಲ್ಗೊಳ್ಳಲು ಆಯ್ಕೆಯಾಗಿದ್ದಾರೆ.