ಹಾಪುರ್ (ಉತ್ತರ ಪ್ರದೇಶ) : ಬಾಲಕಿಯೊಬ್ಬಳನ್ನ ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣ ಧೋಲಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಸಂತ್ರಸ್ತೆಯ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪೊಲೀಸರು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಒಬ್ಬ ಆರೋಪಿಯನ್ನ ಬಂಧಿಸಿದ್ದಾರೆ. ಎರಡನೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ಸಂಬಂಧಿಕರ ಮನೆಗಳ ಮೇಲೆ ಪೊಲೀಸರು ದಾಳಿ ಮುಂದುವರೆಸಿದ್ದಾರೆ.
ಈ ವೇಳೆ ಹಿಂದೂ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ. ಹೀಗಾಗಿ, ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಏನಿದು ಘಟನೆ ?: ಹಾಪುರ್ನ ಧೌಲಾನಾ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾದ 16 ವರ್ಷದ ಬಾಲಕಿ ಪಕ್ಕದ ಅಂಗಡಿಯಿಂದ ಕೆಲವು ವಸ್ತುಗಳನ್ನು ಖರೀದಿಸಲು ಮನೆಯಿಂದ ಹೊರಗೆ ಹೋಗಿದ್ದಳು. ಈ ವೇಳೆ, ಆರೋಪಿ ನದೀಮ್ ಬಾಲಕಿಗೆ ಮಾದಕ ದ್ರವ್ಯ ನೀಡಿದ್ದಾನೆ. ಇದರಿಂದಾಗಿ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ಇದೇ ವೇಳೆ ನದೀಮ್ ತನ್ನ ಸ್ನೇಹಿತನೊಬ್ಬನ ಜೊತೆ ಸೇರಿ ಬಾಲಕಿಯನ್ನು ಅಪಹರಿಸಿದ್ದಾನೆ. ಇಬ್ಬರೂ ಯುವಕರು ಯುವತಿಯನ್ನು ಏಕಾಂತ ಸ್ಥಳಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕುಟುಂಬದವರಿಗೆ ಸುದ್ದಿ ಗೊತ್ತಾಗಿದ್ದು ಹೇಗೆ?: ಬಳಿಕ ಬಾಲಕಿಯನ್ನು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಮೂರು – ನಾಲ್ಕು ಗಂಟೆಗಳ ನಂತರ, ಹುಡುಗಿಗೆ ಪ್ರಜ್ಞೆ ಬಂದಾಗ, ಅವಳು ಮನೆಗೆ ತಲುಪಿ ತನ್ನ ಕುಟುಂಬದವರಿಗೆ ತಿಳಿಸಿದ್ದಾಳೆ. ಈ ವಿಷಯ ತಿಳಿದ ನಂತರ ಯುವತಿಯ ಕುಟುಂಬಸ್ಥರು ಹಿಂದೂ ಸಂಘಟನೆಯ ಜನರು ಮತ್ತು ಬಿಜೆಪಿ ಕಾರ್ಯಕರ್ತರೊಂದಿಗೆ ಧೌಲಾನಾ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಿಒ ಅನಿತಾ ಚೌಹಾಣ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಅವರೆಲ್ಲರನ್ನ ಸಮಾಧಾನಪಡಿಸಿದ್ದಾರೆ.
ಈ ಬಗ್ಗೆ ಸಿಒ ಅನಿತಾ ಚೌಹಾಣ್ ಹೇಳಿದ್ದೇನು?: ”ಕುಟುಂಬದ ಸದಸ್ಯರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮದಲ್ಲಿ ಶಾಂತಿ ಕಾಪಾಡಲು ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.