ಹಾವೇರಿ: ದಿನ ದಿನಕ್ಕೆ ಬೇಸಿಗೆಯ ತಾಪಮಾನ ಹೆಚ್ಚುತ್ತಲೇ ಇದೆ. ಹಾಗೆಯೇ ಉತ್ತರ ಕರ್ನಾಟಕದ ಹೆಬ್ಬಾಗಿಲು ಹಾವೇರಿ ಜಿಲ್ಲೆಯಲ್ಲೂ ಬೇಸಿಗೆಯ ಪ್ರಖರತೆ ಅಧಿಕವಾಗಿದೆ. ಪ್ರಸ್ತುತ ವರ್ಷ ಕಳೆದ ವರ್ಷಕ್ಕಿಂತ ಅಧಿಕ ಉಷ್ಣಾಂಶವಿದ್ದು ಜಿಲ್ಲೆಯ ಜನರು ಬಿಸಿಲಿನ ಬೇಗೆಗೆ ತತ್ತರಿಸಿದ್ದಾರೆ. ಮಧ್ಯಾಹ್ನ 12 ಗಂಟೆಯ ನಂತರ ಸಂಜೆ 5 ಗಂಟೆಯೊಳಗೆ ರಸ್ತೆಗಳಲ್ಲಿ ಜನಸಂಚಾರ ವಿರಳವಾಗುತ್ತಿದೆ.
ಬಿಸಿಲ ತಾಪದಿಂದ ಬೇಸತ್ತ ಜನ ಮಧ್ಯಾಹ್ನದ ವೇಳೆ ಊಟದ ಬದಲು ಹಣ್ಣುಗಳು, ತಂಪು ಪಾನೀಯಗಳು, ಎಳನೀರು, ಕಬ್ಬಿನಹಾಲು ಸೇರಿದಂತೆ ವಿವಿಧ ಪಾನೀಯಗಳತ್ತ ಮುಖ ಮಾಡುತ್ತಿದ್ದಾರೆ. ಕೆಲವರು ಹಣ್ಣುಗಳನ್ನು ಮನೆಗೆ ಕೊಂಡೊಯ್ದರೆ, ಇನ್ನು ಕೆಲವರು ಅಂಗಡಿಗಳಲ್ಲಿ ಸಲಾಡ್ ರೂಪದಲ್ಲಿ ತಿನ್ನುತ್ತಿದ್ದಾರೆ. ಕಲ್ಲಂಗಡಿ, ಕರ್ಬೂಜಾ, ಪೈನಾಪಲ್, ಚಿಕ್ಕು, ದ್ರಾಕ್ಷಿ, ಬಾಳೆಹಣ್ಣು, ಪೇರಲ, ಪಪ್ಪಾಯ, ಡ್ರ್ಯಾಗನ್ ಫ್ರೂಟ್ ಸೇರಿದಂತೆ ವಿವಿಧ ತರದ ಹಣ್ಣುಗಳ ಮಿಶ್ರಣವನ್ನು ಸೇವಿಸುತ್ತಿದ್ದಾರೆ.
ಬೇಸಿಗೆಯಲ್ಲಿ ಹಣ್ಣುಗಳನ್ನು ಸೇವಿಸುವುದರಿಂದ ಹೊಟ್ಟೆ ತಣ್ಣಗಿರುತ್ತದೆ. ಜೊತೆಗೆ, ಹಸಿವಾಗುವುದಿಲ್ಲ ಎನ್ನುತ್ತಾರೆ ಜನರು. ಎಳನೀರು ದರ 50 ರೂಪಾಯಿ ತಲುಪಿದ್ದರೂ, ಜನರು ಎಳನೀರು ಕುಡಿದು ದಾಹ ತೀರಿಸಿಕೊಳ್ಳುತ್ತಿದ್ದಾರೆ. ಹಾವೇರಿಗೆ ಕರಾವಳಿಯ ತಾಳೆಕಾಯಿ ಸಹ ಕಾಲಿಟ್ಟಿದ್ದು, ಜನರು ತಾಳೆಹಣ್ಣುಗಳನ್ನು ಸಹ ಸೇವಿಸುತ್ತಿದ್ದಾರೆ. ತಾಳೆಹಣ್ಣುಗಳಿಗೆ ಸಹ ಬೇಡಿಕೆ ಬಂದಿದ್ದು, 40 ರೂಪಾಯಿಗಳಿಗೆ ತಾಳೆಹಣ್ಣುಗಳು ಮಾರಾಟವಾಗುತ್ತಿವೆ. ತಂಪು ಪಾನೀಯ ಅಂಗಡಿಗಳು ಮತ್ತು ಜ್ಯೂಸ್ ಐಸ್ ಕ್ರೀಮ್ ಅಂಗಡಿಗಳು ಗ್ರಾಹಕರಿಂದ ತುಂಬಿವೆ.
ವೈದ್ಯರು ಬೇಸಿಗೆ ಕಾಲದಲ್ಲಿ ಹೆಚ್ಚೆಚ್ಚು ನೀರು ಕುಡಿಯುವಂತೆ, ಜೊತೆಗೆ ಬಿಸಿಲಿನಲ್ಲಿ ಸಂಚರಿಸುವಾಗ ಕೊಡೆಗಳನ್ನು ಬಳಕೆ ಮಾಡುವಂತೆ, ಚರ್ಮದ ಬಗ್ಗೆ ಹೆಚ್ಚು ಜಾಗೃತೆಯಿಂದ ಇರುವಂತೆ ಸೂಚಿಸಿದ್ದಾರೆ. ಬೇಸಿಗೆ ಮಧ್ಯ ಜಿಲ್ಲೆಯಲ್ಲಿ ಅಕಾಲಿಕ ಮಳೆ ಶುರುವಾಗಿದ್ದು, ಕೆಲವೊಮ್ಮೆ ತಂಪು ವಾತಾವರಣ ತರುತ್ತಿದೆ. ಜಿಲ್ಲೆಯ ಜನರು ಬೇಸಿಗೆಯ ಆರಂಭದಲ್ಲಿ ಹೀಗಾದರೆ ಮುಂದಿನ ದಿನಗಳನ್ನು ಯಾವ ರೀತಿ ಕಳೆಯಬೇಕು? ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.