ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭಮೇಳದ ಸಂಭ್ರಮ ಮನೆ ಮಾಡಿದೆ. ಈಗಾಗಲೇ ಲಕ್ಷಾಂತರ ನಾಗಸಾಧುಗಳು ಆಗಮಿಸಿದ್ದು, ತ್ರಿವೇಣಿ ಸಂಗಮದಲ್ಲಿ ಪವಿತ್ರ ಶಾಹಿ ಸ್ನಾನದಲ್ಲಿ ಮಿಂದೆದ್ದಿದ್ದಾರೆ.
13 ಅಖಾಡಗಳ ಸಾಧು ಸಂತರು ಇವತ್ತು ಸಂಕ್ರಾಂತಿ ದಿನದಂದು ತ್ರಿವೇಣಿ ಸಂಗಮದಲ್ಲಿ ಮಿಂದೇಳಲಿದ್ದು, ಗಂಗಾ – ಯಮುನಾ-ಸರಸ್ವತಿ ನದಿಗಳಲ್ಲಿ ಸುಮಾರು 1.5 ಕೋಟಿ ಜನ ಅಮೃತ ಸ್ನಾನ ಮಾಡಿ ಪುನೀತರಾಗಲಿದ್ದಾರೆ.
ಈ ಬಗ್ಗೆ ಅಖಾಡ ಪರಿಷತ್ ಅಧ್ಯಕ್ಷ ರವೀಂದ್ರ ಪುರಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಅಮೃತ ಸ್ನಾನಕ್ಕೆ ಎಲ್ಲರಿಗೂ 40 ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ಒಬ್ಬರ ನಂತರ ಮತ್ತೊಬ್ಬರು ಪುಣ್ಯ ಸ್ನಾನ ಮಾಡಲಿದ್ದಾರೆ ಎಂದಿದ್ದಾರೆ.
ನಿನ್ನೆಯಿಂದ ಆರಂಭವಾಗಿರುವ ಮಹಾಕುಂಭಮೇಳ ಫೆ.26 ರವರೆಗೂ ನಡೆಯಲಿದ್ದು 45 ಕೋಟಿಗೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ನಿನ್ನೆ ಒಂದೇ ದಿನ ಅಂದಾಜು 1.75 ಕೋಟಿ ಜನ ಪುಣ್ಯ ಸ್ನಾನ ಮಾಡಿ ಭಕ್ತಿಭಾವ ಮೆರೆದಿದ್ದಾರೆ.
ಭಾರತದ ಸಾಂಸ್ಕೃತಿಕತೆಯ ಹಿರಿಮೆ ಮಹಾಕುಂಭಮೇಳಕ್ಕೆ ನಿನ್ನೆ ವಿದ್ಯುಕ್ತ ಚಾಲನೆ ಸಿಕ್ಕಿದೆ.144 ವರ್ಷಗಳಿಗೊಮ್ಮೆ ನಡೆಯುವ ವಿಶ್ವದ ಅತಿದೊಡ್ಡ ಧಾರ್ಮಿಕ ಮೇಳ ಎಂಬ ಹೆಗ್ಗಳಿಕೆ ಮಹಾ ಕುಂಭಮೇಳಕ್ಕೆ ಇದೆ.
ಗಂಗಾ, ಯಮುನಾ, ಸರಸ್ವತಿ ನದಿಗಳ ಪವಿತ್ರ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರೆ ಪಾಪನಾಶ, ಮೋಕ್ಷ ಸಿಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ದೇಶವಾಸಿಗಳು ಮಾತ್ರವಲ್ಲದೆ ಲಕ್ಷಾಂತರ ವಿದೇಶಿಗರು ಕೂಡ ಇಲ್ಲಿಗೆ ಆಗಮಿಸಿ ಪುಣ್ಯ ಸ್ನಾನ ಮಾಡಲಿದ್ದಾರೆ.