ನವದೆಹಲಿ: 14 ಕೋಟಿಗೂ ಹೆಚ್ಚಿನ ನೋಂದಾಯಿತ ಸದಸ್ಯರನ್ನು ಹೊಂದಿ ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ ಎಂದು ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಜೆಪಿ 10,000 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿ ಮತ್ತೊಂದು ದಾಖಲೆ ಬರೆದಿದೆ.
2025ರ ಮಾರ್ಚ್ 31ಕ್ಕೆ ಅಂತ್ಯವಾದ ಆರ್ಥಿಕ ವರ್ಷದಲ್ಲಿ ಬ್ಯಾಂಕಿನಲ್ಲಿ ಇರುವ ಠೇವಣಿ, ನೀಡಿರುವ ಸಾಲ, ಮುಂಗಡ ಪಾವತಿ ಸೇರಿ ಬಿಜೆಪಿ ಬೊಕ್ಕಸದಲ್ಲಿ 10,000 ಕೋಟಿ ರೂಪಾಯಿಗೂ ಹೆಚ್ಚಿನ ಹಣ ಇದೆ.
ಕೇಂದ್ರ ಚುನಾವಣಾ ಆಯೋಗಕ್ಕೆ ಬಿಜೆಪಿ ಸಲ್ಲಿಸಿದ ಲೆಕ್ಕ ಪರಿಶೋಧನಾ ವರದಿಯ ಅನ್ವಯ ಬ್ಯಾಂಕಿನಲ್ಲಿ ನಗದು ಮತ್ತು ಠೇವಣಿ ರೂಪದಲ್ಲಿ 9996 ಕೋಟಿ ರೂ. ಇದೆ.
ಸಾಲ ಮತ್ತು ಮುಂಗಡ ಪಾವತಿ ರೂಪದಲ್ಲಿ 234 ಕೋಟಿ ರೂಪಾಯಿ ಇದ್ದು ಒಟ್ಟು 10230 ಕೋಟಿಯಷ್ಟಾಗುತ್ತದೆ. 2023- 24ನೇ ಆರ್ಥಿಕ ವರ್ಷದಲ್ಲಿ ಬಿಜೆಪಿ ಬಳಿ 3967 ಕೋಟಿ ರೂ.ಹಣವಿತ್ತು. 2025ರಲ್ಲಿ 6125 ಕೋಟಿ ರೂ. ದೇಣಿಗೆ ಬಂದಿದೆ. 634 ಕೋಟಿ ರೂ. ಬಡ್ಡಿ ಬಂದಿದೆ.




