ಬೆಳಗಾವಿ: ಪ್ರೀತಿ, ಪ್ರೇಮದ ನಾಟಕವಾಡಿ ಮದುವೆಯಾಗುವುದಾಗಿ ಪುಸಲಾಯಿಸಿ ಐದು ವರ್ಷಗಳ ಕಾಲ ಅತ್ಯಾಚಾರ ಎಸಗಿದ ಯೋಧನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 20 ಸಾವಿರ ರೂ. ದಂಡ ವಿಧಿಸಿ ಇಲ್ಲಿಯ 8ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಮಂಗಳವಾರ (ಡಿ.23) ಮಹತ್ವದ ತೀರ್ಪು ನೀಡಿದೆ.
ಭಾರತೀಯ ಸೇನೆಯ ಯೋಧ ನಾಗರಾಜ ಧನಪಾಲ ಕ್ಯಾಮನ್ನವರ ಶಿಕ್ಷೆಗೆ ಒಳಗಾಗಿದ್ದಾನೆ. ಆರೋಪಿ ನಾಗರಾಜ ಹಾಗೂ ದೂರುದಾರ ಮಹಿಳೆ ಐದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಆರೋಪಿ ರಜೆ ಮೇಲೆ ಊರಿಗೆ ಬಂದಾಗ ಇಬ್ಬರು ಸುತ್ತಾಡುತ್ತಿದ್ದರು. 2022ರ ಎಪ್ರಿಲ್ 8ರಂದು ಸಂಜೆ 7 ಗಂಟೆ ಸುಮಾರಿಗೆ ಆರೋಪಿ ಮಹಿಳೆಯನ್ನು ಪುಸಲಾಯಿಸಿ ಅಮಟೂರು ಗ್ರಾಮದ ಹರಿಜನಕೇರಿಗೆ ಹೊಂದಿಕೊಂಡ ದಕ್ಷಿಣ ಬದಿಯ ಅಮಟೂರ-ಬೇವಿನಕೊಪ್ಪ ರಸ್ತೆ ಬಳಿ ಜಮೀನಿಗೆ ಕರೆದುಕೊಂಡು ಹೋಗಿ ಒತ್ತಾಯಪೂರ್ವಕವಾಗಿ ದೈಹಿಕ ಸಂಪರ್ಕ ನಡೆಸಿದ್ದನು.
ಆಗ ದೂರುದಾರ ಮಹಿಳೆ, ಇನ್ನೂ ನಾವಿಬ್ಬರೂ ವಿವಾಹವಾಗಿಲ್ಲ ಎಂದು ಹೇಳಿದರೂ ಆರೋಪಿ ದೈಹಿಕ ಸಂಪರ್ಕ ನಡೆಸಿದ್ದನು. ಅಲ್ಲದೇ ಆರೋಪಿ ರಜೆ ಮೇಲೆ ಊರಿಗೆ ಬಂದಾಗ ಪದೇ ಪದೇ ಹಲವು ಸಲ ದೈಹಿಕ ಸಂಪರ್ಕ ನಡೆಸಿದ್ದನು.
ಮಹಿಳೆ ಆರೋಪಿಗೆ ಮದುವೆ ಆಗುವಂತೆ ಹೇಳಿದರೂ ಆತ ಒಪ್ಪಲಿಲ್ಲ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಜೀವಂತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದನು. ಈ ಬಗ್ಗೆ ಮಹಿಳೆ ಬೈಲಹೊಂಗಲ ಠಾಣೆಗೆ ದೂರು ನೀಡಿದ್ದರು. ಬೈಲಹೊಂಗಲ ಠಾಣೆ ಸಿಪಿಐಗಳಾದ ಕೆ.ಜಿ.ದೀಪು ಹಾಗೂ ಶಿವಶಂಕರ ಆರ್. ಗಣಾಚಾರಿ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದ ನ್ಯಾಯಾಧೀಶ ಶಿವಪುತ್ರ ದಿಂಡಲಕೊಪ್ಪ ಅವರು ವಿಚಾರಣೆ ನಡೆಸಿ ಆರೋಪಿಗೆ ಶಿಕ್ಷೆ ನೀಡಿದ್ದಾರೆ. ಸಂತ್ರಸ್ತಗೆ ಪರಿಹಾರ ನೀಡಲು ಸೂಚಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕಿರಣ ಎಸ್. ಪಾಟೀಲ ವಾದ ಮಂಡಿಸಿದ್ದರು.




