Ad imageAd image

ಮಕ್ಕಳ ಹೆಸರಿನಲ್ಲಿ 1026 ರೂ. ನಿಶ್ಚಿತ ಠೇವಣಿ : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯಲು ಶಿಕ್ಷಕನ ಪ್ರಯತ್ನ

Bharath Vaibhav
ಮಕ್ಕಳ ಹೆಸರಿನಲ್ಲಿ 1026 ರೂ. ನಿಶ್ಚಿತ ಠೇವಣಿ : ಮಕ್ಕಳನ್ನು ಸರ್ಕಾರಿ ಶಾಲೆಗೆ ಸೆಳೆಯಲು ಶಿಕ್ಷಕನ ಪ್ರಯತ್ನ
WhatsApp Group Join Now
Telegram Group Join Now

ಶಿಕ್ಷಣ ಉಚಿತ, ಠೇವಣಿ ಖಚಿತ :

 ಅಣ್ಣಾಸಾಬ ತೆಲಸಂಗ,
ಅಥಣಿ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಎಂಬುದು ಒಂದು ಉದ್ಯಮವಾಗಿ ಪರಿಣಮಿಸಿದೆ. ಅಥಣಿ ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಹಳ್ಳಿ ಹಳ್ಳಿಗಳಲ್ಲೂ ಖಾಸಗಿ ಕಾನ್ವೆಂಟ್‌ ಶಾಲೆಗಳ ವಾಹನಗಳು ವಿದ್ಯಾರ್ಥಿಗಳ ಮನೆಯವರೆಗೆ ಓಡಾಡುತ್ತಿವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಯಾವುದೇ ಖಾಸಗಿ ಶಾಲೆಗಳಿಗೆ ನಮ್ಮ ಶಾಲೆಯು ಕಮ್ಮಿ ಇಲ್ಲ ಎಂಬಂತೆ ಅನೇಕ ಸರ್ಕಾರಿ ಶಾಲೆಗಳು ಮಕ್ಕಳನ್ನು ಕೈ ಬೀಸಿ ಕರೆಯುತ್ತಿವೆ.
ಹೌದು.. ಅಥಣಿ ಪಟ್ಟಣದ ಹೊರವಲಯದ ಅಥಣಿ ಗ್ರಾಮೀಣ ಸಂಕೋನಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಡಕಂಬಿ ತೋಟದ
ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ, ಶಿಕ್ಷಕರು ಮತ್ತು ಎಸ್ ಡಿ ಎಂ ಸಿ ಸದಸ್ಯರು ಶಾಲೆಯ ಸಬಲೀಕರಣ ಮತ್ತು ಪ್ರವೇಶಾತಿ ಹೆಚ್ಚಳಕ್ಕಾಗಿ ವಿನೂತನ ಪ್ರಯೋಗ ಆರಂಭಿಸಿ ಅನೇಕ ಸರ್ಕಾರಿ ಶಾಲೆಗಳ ಪುನರ್ ಚೇತನಕ್ಕಾಗಿ ಪ್ರೇರಣೆಯಾಗಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯ ಹಣಮಂತ ಯತಗಾರ ಸರ್ಕಾರಿ ಶಾಲೆಗಳತ್ತ ವಿದ್ಯಾರ್ಥಿಗಳನ್ನು ಕರೆ ತರಲು ಮಕ್ಕಳ ಹೆಸರಿನಲ್ಲಿ ತಲಾ ₹.1026 ನಿಶ್ಚಿತ ಠೇವಣಿ ಘೋಷಿಸಿದ್ದಾರೆ. ಇದಲ್ಲದೆ ಎಸ ಡಿಎಂಸಿ ಅಧ್ಯಕ್ಷ ಶ್ರೀಕಾಂತ್ ಬಡಕಂಬಿ ಹಾಗೂ ಸರ್ವ ಸದಸ್ಯರು ನೂತನವಾಗಿ ಪ್ರವೇಶಾತಿ ಹೊಂದುವ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಜೊತೆಗೆ ಕಲಿಕಾ ಸಾಮಗ್ರಿಗಳ ಕಿಟ್ ವಿತರಿಸುವ ವಾಗ್ದಾನ ಮಾಡಿ ಖಾಸಗಿ ಶಾಲೆಗಳಿಗೆ ಸವಾಲು ಒಡ್ಡುತ್ತಿದ್ದಾರೆ.

ಒಂದನೇ ತರಗತಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಶಾಲೆಯ ಪ್ರಧಾನ ಶಿಕ್ಷಕ ಹನುಮಂತ ಯತಗಾರ ಅವರು ಸ್ವಂತ ಹಣದಿಂದ ಭಾರತೀಯ ಅಂಚೆ ಇಲಾಖೆಯಲ್ಲಿ ತಲಾ ₹ 1026 ನಿಶ್ಚಿತ ಠೇವಣಿ ಇರಿಸುವ ಮೂಲಕ ಮೂಲಕ 10 ವರ್ಷಗಳ ಅವಧಿಯ ಬಾಂಡ್ ಮಾಡಿಸಿ ಕೊಡುವದಾಗಿ ಘೋಷಣೆ ಮಾಡಿ ಸರ್ಕಾರಿ ಶಾಲೆಯ ಸಬಲೀಕರಣ ಹಾಗೂ ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ.ಶಾಲೆಯ ಸಬಲೀಕರಣ ಹಾಗೂ ದಾಖಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಬರುವ 2026- 27 ನೇ ಸಾಲಿನಲ್ಲಿ 1ನೇ ತರಗತಿಗೆ ಪ್ರವೇಶ ಹೊಂದುವ ವಿದ್ಯಾರ್ಥಿಗಳಿಗೆ ₹.1026 ನಿಶ್ಚಿತ ಠೇವಣಿಯನ್ನು ಇಡುವ ಇಚ್ಛೆ ಹೊಂದಿದ್ದೇನೆ. ಎಷ್ಟೇ ವಿದ್ಯಾರ್ಥಿಗಳು ಪ್ರವೇಶ ಹೊಂದಿದ್ದರೂ ಅವರ ಹೆಸರಿನಲ್ಲಿ ಭಾರತೀಯ ಅಂಚೆ ಇಲಾಖೆಯಲ್ಲಿ ಠೇವಣಿ ಇಟ್ಟು ಬಾಂಡ್ ವಿತರಿಸುತ್ತೇನೆ ಎನ್ನುತ್ತಿದ್ದಾರೆ ಮುಖ್ಯ ಶಿಕ್ಷಕ ಹಣಮಂತ ಯತಗಾರ.

ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀಕಾಂತ ಬಡಕಂಬಿ ಅವರು ಕೂಡ ಶಾಲೆಯ ಮುಖ್ಯೋಪಾಧ್ಯಾಯರ ಈ ರೀತಿಯ ವಿನೂತನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಲ್ಲದೆ ಅವರಿಂದ ಪ್ರೇರಿತಗೊಂಡು ನಾನು ಮತ್ತು ಎಲ್ಲಾ ಸದಸ್ಯರು ನೂತನವಾಗಿ ಪ್ರವೇಶ ಹೊಂದುವ ಎಲ್ಲ ವಿದ್ಯಾರ್ಥಿಗಳಿಗೆ ತಲಾ ₹.1000 ಮೌಲ್ಯದ ಕಲಿಕಾ ಸಾಮಗ್ರಿಗಳ ಕಿಟ್ ವಿತರಿಸುವುದಾಗಿ ಘೋಷಿಸಿದರು.
ಇದಲ್ಲದೆ ಶಾಲೆಯ ಶಿಕ್ಷಕರಾದ ಬಿ ಎಸ್ ನಾವಿ ಮತ್ತು ಆರ್ ಆರ್ ಪಠಾಣ ಅವರು ಕೂಡ 2 ರಿಂದ 7ನೇ ತರಗತಿಯವರಿಗೆ ಈ ಶಾಲೆಯಲ್ಲಿ ಪ್ರವೇಶ ಪಡೆದುಕೊಳ್ಳುವ ಮಕ್ಕಳಿಗೆ ಉಚಿತ ನೋಟ್ ಬುಕ್ ಮತ್ತು ಪೆನ್ನು, ಜಾಮಿಟ್ರಿ ಬಾಕ್ಸ್ ವಿತರಿಸುವ ವಾಗ್ದಾನ ಮಾಡಿದರು.
ಒಟ್ಟಾರೆ ಶಾಲೆಯ ಶಿಕ್ಷಕರು ಮತ್ತು ಎಸ್ ಡಿ ಎಮ್ ಸಿ ಸದಸ್ಯರ ಸಹಾಯ ಸಹಕಾರದಿಂದ ಸರ್ಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತಿದ್ದು, ಖಾಸಗಿ ಶಾಲೆಗಳು ಹೊಂದಿರುವ ಅನೇಕ ಸೌಲಭ್ಯಗಳನ್ನು ಹೊಂದಿರುವ ಈ ಸರ್ಕಾರಿ ಶಾಲೆಯು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಅಷ್ಟೇ ಅಲ್ಲ, ರಾಜ್ಯದಲ್ಲಿಯೇ ಅತ್ಯುತ್ತಮ ಶಾಲೆಗಳಲ್ಲಿ ಒಂದಾಗಿದೆ ಎಂಬುದು ಶಿಕ್ಷಣ ಇಲಾಖೆ ಹಾಗೂ ತಾಲೂಕಿನ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ.

” ಈ ಸರ್ಕಾರಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯ “
ಅಥಣಿ ಗ್ರಾಮೀಣ ಪ್ರದೇಶದಲ್ಲಿರುವ ಬಡಕಂಬಿ ತೋಟದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯು ಸನ್ 1958ರಲ್ಲಿ ಆರಂಭಗೊಂಡಿದ್ದು, ಶಿಕ್ಷಣ ಪ್ರೇಮಿ ಮಹಾಂತೇಶ ಐಗಳಿ ಈ ಶಾಲೆಯ ನಿರ್ಮಾಣಕ್ಕೆ 4 ಗುಂಟೆ ತಮ್ಮ ಸ್ವಂತ ಜಮೀನನ್ನ ಭೂದಾನ ಮಾಡಿದ್ದಾರೆ. ಒಂದರಿಂದ ಐದು ತರಗತಿಯವರಿಗೆ ನಡೆಯುತ್ತಿದ್ದ ಈ ಶಾಲೆಯು ಹಂತ ಹಂತವಾಗಿ ಈಗ 7ನೇ ತರಗತಿಯವರೆಗೆ ಶಿಕ್ಷಣ ನಡೆಯುತ್ತಿದ್ದು, 213 ಕ್ಕೂ ಅಧಿಕ ಮಕ್ಕಳಿರುವ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ಹಣಮಂತ ಯತಗಾರ, ಬಿಎಸ್ ನಾವಿ, ಎ. ಎಂ ಹನಗoಡಿ, ವಿ. ಜೆ. ಹೊನಕಾಂಡೆ, ಎಸ್. ಎ ಹಲ್ಯಾಳ, ಚೈತ್ರಾ ಶೆಟ್ಟಿ, ಸುನಂದಾ ನಾಯಕ, ರಫೀಕ್ ಪಠಾಣ, ಎಂ ಟಿ ಸೂರ್ಯವಂಶಿ ಮತ್ತು ಪಿ ಎಸ್ ಮಾಳೆಗಾರ 10 ಜನ ವಿಷಯವಾರು ನುರಿತ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.ಈ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಮಧ್ಯಾಹ್ನದ ಬಿಸಿಯೂಟವನ್ನು ಶಾಲೆಯಲ್ಲಿಯೇ ತಯಾರಿಸಲಾಗುತ್ತದೆ. ಸುವ್ಯವಸ್ಥಿತವಾದ ಶಾಲಾ ಕೊಠಡಿ, ಆಸನ ವ್ಯವಸ್ಥೆ, ಪ್ರತಿ ಕೊಠಡಿಯಲ್ಲಿ ಸಿ ಸಿ ಕ್ಯಾಮೆರಾ ಅಳವಡಿಕೆ, ಪ್ಯಾನ್ ಮತ್ತು ಸ್ಮಾರ್ಟ್ ಬೋರ್ಡ್ ಗಳ ಅಳವಡಿಕೆ ಮಾಡಲಾಗಿದೆ. ಶಾಲಾ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಹೈಟೆಕ್ ಶೌಚಾಲಯವನ್ನು ನಿರ್ಮಿಸಲಾಗಿದೆ. ಇದಲ್ಲದೆ ಮಕ್ಕಳಿಗೆ ಶುದ್ಧ ಕುಡಿಯುವ ನೀರು, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ ನಿರ್ಮಿಸಲಾಗಿದೆ. ಈ ಶಾಲೆಯ ಪ್ರತಿಯೊಂದು ಗೋಡೆಯು, ಮತ್ತು ಕಿಟಕಿ ಬಾಗಿಲು ಕಲಿಕಾ ಕಲಿಕಾ ಅಕ್ಷರಗಳು ಮತ್ತು ಚಿತ್ರ ಬರಹದ ಮೂಲಕ ಮಕ್ಕಳಿಗೆ ಪಾಠ ಮಾಡುತ್ತವೆ. ಇಲ್ಲಿನ ನುರಿತ ಶಿಕ್ಷಕರು ಮಕ್ಕಳಿಗೆ ತಿಳಿಯುವಂತೆ ಪಾಠವನ್ನು ಹೇಳುವುದರ ಜೊತೆಗೆ ಕ್ರೀಡೆ, ಯೋಗ ಮತ್ತು ವ್ಯಕ್ತಿತ್ವ ವಿಕಸನದ ಮಾರ್ಗದರ್ಶನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ.

ಮಕ್ಕಳ ಆಟ ಪಾಠಕ್ಕೆ ಮೈದಾನದ ಕೊರತೆ..!
ಗುಣಮಟ್ಟದ ಶಿಕ್ಷಣಕ್ಕಾಗಿ ಅನೇಕ ಸೌಲಭ್ಯಗಳನ್ನು ಹೊಂದಿರುವ ಈ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಆಟವಾಡಲು ಮೈದಾನದ ಕೊರತೆ ಇದೆ. ಇದೇ ಶಾಲೆಯ ಆವರಣದಲ್ಲಿ ಅಂಗನವಾಡಿ ಕೇಂದ್ರ ಕೂಡ ಇರುವುದರಿಂದ ಕೇವಲ 4 ಗುಂಟೆ ಜಾಗ ಮಕ್ಕಳ ಆಟ ಪಾಠಕ್ಕೆ ಸಾಲುತ್ತಿಲ್ಲ, ಶಾಲೆಯ ಅಭಿವೃದ್ಧಿ ಮತ್ತು ಮಕ್ಕಳ ಹಿತ ದೃಷ್ಟಿಯಿಂದ ಇನ್ನಷ್ಟು ಸ್ಥಳಾವಕಾಶದ ಅಗತ್ಯ ಇದೆ. ಇಲ್ಲಿನ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಜೊತೆಗೆ ಕಂಪ್ಯೂಟರ್ ಶಿಕ್ಷಣ ಕೂಡ ಅಗತ್ಯವಾಗಿದ್ದು, ಮುಂಬರುವ ದಿನಗಳಲ್ಲಿ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಶಾಲೆಯನ್ನ ಉನ್ನತೀಕರಿಸಿ ಪ್ರೌಢಶಾಲೆಯ ಸೌಲಭ್ಯಗಳನ್ನ ಒದಗಿಸಬೇಕು, ಇನ್ನಷ್ಟು ಸ್ಥಳಾವಕಾಶವನ್ನು ನೀಡುವುದರ ಜೊತೆಗೆ ಶಾಲಾ ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಕಾಂಪೌಂಡ್ ಗೋಡೆಯನ್ನು ನಿರ್ಮಿಸಬೇಕಾಗಿದೆ ಎಂಬುದು ಇಲ್ಲಿನ ಶಿಕ್ಷಕರ ಮತ್ತು ಪಾಲಕರ ಅಳಲು. ಈ ನಿಟ್ಟಿನಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀಕಾಂತ ಬಡಕಂಬಿ, ಉಪಾಧ್ಯಕ್ಷ ಚಂದ್ರಶೇಖರ ಐಗಳಿ, ಸದಸ್ಯರಾದ ಶ್ರೀಕಾಂತ ನಿಂಬರಗಿ, ಶೇಖರ್ ನಾರಪ್ಪಗೋಳ, ಸುಜಾತಾ ಬಡಕಂಬಿ, ಸುನಿತಾ ಬಡಕಂಬಿ ಮತ್ತು ಧರೆಪ್ಪ ಚವ್ಹಾಣ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಶಾಸಕರ ಸಹಕಾರ ಪಡೆದುಕೊಂಡು ಇನ್ನಷ್ಟು ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂಬುದು ಇಲ್ಲಿನ ಪಾಲಕರ ಆಶೀಯವಾಗಿದೆ.

ಕೋವಿಡ್ ಬಳಿಕ ಹಲವು ಕಡೆ ಸರ್ಕಾರಿ ಶಾಲೆಗಳ ದಾಖಲಾತಿ ಕುಸಿದಿತ್ತು. ಆಗ ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವುದೇ ಸವಾಲಾಗಿ ಪರಿಣಮಿಸಿತ್ತು. ಈ ಶಾಲೆಯ ಮುಖ್ಯೋಪಾಧ್ಯಾಯ ಹನುಮಂತ ಯತಗಾರ ಅವರಂತೆ ಅನೇಕ ಜನ ಶಿಕ್ಷಕರು ಸರ್ಕಾರಿ ಶಾಲೆಗಳ ಪುನರ್ ಚೇತನ ಮತ್ತು ಮಕ್ಕಳ ದಾಖಲಾತಿಗಾಗಿ ಮಕ್ಕಳ ಹೆಸರಿನಲ್ಲಿ ಠೇವಣಿ ಇಡುವುದು ಮತ್ತು ಕಲಿಕಾ ಸಾಮಗ್ರಿಗಳನ್ನ ಒದಗಿಸುವಂತಹ ವಿನೂತನ ಪ್ರಯತ್ನದಿಂದ ಮತ್ತೆ ದಾಖಲಾತಿ ಹೆಚ್ಚಾಗುತ್ತಿವೆ.
– ಜಗನ್ನಾಥ ಬಾಮನೆ, ಕನ್ನಡಪರ ಹೋರಾಟಗಾರ.

ನಮಗೆ ಅನ್ನದಾತರಾಗಿರುವ ಮಕ್ಕಳು ಹಾಗೂ ಶಾಲೆಯ ಸೇವೆ ಮಾಡಿ ಸಂತೃಪ್ತಿ ಪಡುವುದೇ ನನ್ನ ಮುಖ್ಯ ಗುರಿ. ಇದರಿಂದ ನನಗೆ ಆತ್ಮ ತೃಪ್ತಿ ಇದೆ. ಇಲ್ಲಿನ ಎಸ್ ಡಿಎಂಸಿ ಸದಸ್ಯರ ಮತ್ತು ಪಾಲಕರ ಸಹಕಾರದಿಂದ ಎಲ್ಲ ಶಿಕ್ಷಕರು ಪ್ರಾಮಾಣಿಕ ಪ್ರಯತ್ನ ಮಾಡಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತೇವೆ. ಒಂದನೇ ತರಗತಿಗೆ ಪ್ರವೇಶ ಹೊಂದುವ ಮಕ್ಕಳಿಗೆ ತಲಾ ₹. 1026 ನಿಶ್ಚಿತ ಠೇವಣಿ ಇಡಲಾಗುವುದು, ಈ ಅವಕಾಶ ಏಪ್ರಿಲ್ 10 ರಿಂದ ಜೂನ್ 30 ರ ವರೆಗೆ ಇರಲಿದೆ. ಪಾಲಕರು ತಮ್ಮ ಮಕ್ಕಳ ಶಾಲಾ ಪ್ರವೇಶವನ್ನು ನಮ್ಮ ಸರ್ಕಾರಿ ಶಾಲೆಯಲ್ಲಿ ದಾಖಲಿಸಿ ಉಚಿತ ಶಿಕ್ಷಣದ ಜೊತೆಗೆ ಠೇವಣಿ ಬಾಂಡ್ ಖಚಿತ ಪಡಿಸಿಕೊಳ್ಳಬೇಕು.
– ಹನುಮಂತ ಯತಗಾರ, ಮುಖ್ಯೋಪಾಧ್ಯಾಯ.

ನಮ್ಮ ಶಾಲೆಯ ಮುಖ್ಯೋಪಾಧ್ಯಾಯರು ನೀಡುವ ನಿಶ್ಚಿತ ಠೇವಣಿ ಮೊತ್ತದಿಂದ ನಮ್ಮ ಮಕ್ಕಳ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ. ಬ್ಯಾಗ್ ನೋಟ್‌ಬುಕ್‌, ಇನ್ನಿತರ ಕಲಿಕಾ ಸಾಮಗ್ರಿಗಳನ್ನು ಒದಗಿಸಿರುವುದು ಅನೇಕ ಮಕ್ಕಳಲ್ಲಿ ಕಲಿಕೆ ವಾತಾವರಣ ಮೂಡಿಸುವಲ್ಲಿ ಸಹಕಾರಿಯಾಗಿದೆ.
– ಸುನಿತಾ ಬಡಕಂಬಿ, ಮಕ್ಕಳು ಪಾಲಕರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!