ಆಲಿಗಢ್: ಮಾಸಿಕ 15 ಸಾವಿರ ವೇತನ ಪಡೆಯುವ ವ್ಯಕ್ತಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 11 ಕೋಟಿ 11 ಲಕ್ಷ 85 ಸಾವಿರ 991 ರೂ.ಗಳ ಆದಾಯ ತೆರಿಗೆ ಪಾವತಿಸುವಂತೆ ಇಲಾಖೆ ನೋಟಿಸ್ ಕಳುಹಿಸಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಆಲಿಗಢದ ಕೀಲಿ ರಿಪೇರಿ ಮಾಡುವ ಯೋಗೇಶ್ ಶರ್ಮಾ ಜೀವನ ನಡೆಸುವುದೇ ಸಂಕಷ್ಟ ಎಂದು ಆರ್ಥಿಕ ಸಂಕಷ್ಟದಲ್ಲಿ ಬದುಕುವಾಗ ಈ ನೋಟಿಸ್ ಅವರಿಗೆ ಶಾಕ್ ಮೂಡಿಸಿದೆ. ಅಂತಹದರಲ್ಲಿ ಇಷ್ಟು ಬೃಹತ್ ಗಾತ್ರದ ಮೊತ್ತದ ಐಟಿ ನೋಟಿಸ್ ಅವರಿಗೆ ದಿಗಿಲು ಮೂಡಿಸಿದ್ದು, ಅವರನ್ನು ಸಂಕಷ್ಟಕ್ಕೆ ದೂಡಿದೆ.
ಕಳೆದ ಏಳು ವರ್ಷದಿಂದ ಲಾಕ್ ಸ್ಪ್ರಿಂಗ್ ಮಾಡುವ ಕೆಲಸ ಮಾಡುತ್ತಿರುವ ಯೋಗೇಶ್ ಶರ್ಮಾ, ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಮಾಸಿಕ 15 ರಿಂದ 20 ಸಾವಿರ ರೂ ವೇತನ ಪಡೆಯುತ್ತಿದ್ದು, ಬರುವ ಇಷ್ಟು ವೇತನದಲ್ಲಿ ಮನೆ ನಡೆಸುವುದು ಸವಾಲಾಗಿದೆ. ಹಣದ ಬಿಕ್ಕಟ್ಟಿನಿಂದ ಬಳಲುತ್ತಿರುವ ಅವರು ವಿದ್ಯುತ್ ಬಿಲ್ ಪಾವತಿ ಮಾಡದ ಹಿನ್ನೆಲೆ, ವಿದ್ಯುತ್ ಕಡಿತಗೊಳಿಸಲಾಗಿದೆ.
ಕಳೆದೆರಡು ವರ್ಷಗಳಿಂದ ಹೆಂಡತಿ ಕ್ಷಯರೋಗದಿಂದ ಬಳಲುತ್ತಿದ್ದು, ಹೆಂಡತಿಯ ಚಿಕಿತ್ಸೆಗೆ ಹಣ ಹೊಂದಿರುವುದರಲ್ಲಿ ಹೈರಾಣಾಗಿದ್ದಾರೆ. ಇಂತಹ ಸಂಕಷ್ಟಗಳ ಮಧ್ಯೆ ಕಳೆದ ತಿಂಗಳು ಅವರಿಗೆ ಆದಾಯ ತೆರಿಗೆ ಇಲಾಖೆ 10 ಲಕ್ಷದ ಐಟಿ ನೋಟಿಸ್ ಜಾರಿ ಮಾಡಿತ್ತು. ಆದರೆ, ಇದನ್ನು ಯೋಗೇಶ್ ನಿರ್ಲಕ್ಷಿಸಿದ್ದರು.
ಹೆಚ್ಚು ಆದಾಯದ ಇಲ್ಲದ ತಮಗೆ ಎಲ್ಲೋ ತಪ್ಪಾಗಿ ನೋಟಿಸ್ ಜಾರಿಯಾಗಿದೆ ಎಂದು ಸುಮ್ಮನಿದ್ದ ಯೋಗೇಶ್ಗೆ ಇದೀಗ 11 ಕೋಟಿ ರೂ ನೋಟಿಸ್ ನೀಡಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಯೋಗೇಶ್, ಇದು ಎಲ್ಲೋ ತಪ್ಪಾಗಿ ಈ ರೀತಿ ನೋಟಿಸ್ ಜಾರಿ ಮಾಡಲಾಗಿದೆ. ತನಿಖೆ ಬಳಿಕ ಇದು ತಿಳಿಯಲಿದೆ ಎಂದಿದ್ದಾರೆ.
ಈ ಸಂಬಂಧ ಯೋಗೇಶ್ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ನ್ಯಾಯಕ್ಕಾಗಿ ಮನವಿ ಸಲ್ಲಿಸಿದ್ದು, ತಮ್ಮ ಆರ್ಥಿಕ ದುರ್ಬಲತೆಯನ್ನು ತಿಳಿಸಿದ್ದು, ನೋಟಿಸ್ ಕುರಿತು ಮನವಿ ಸಲ್ಲಿಸಿದ್ದಾರೆ. ಕೀಲಿ ರೀಪೇರಿ ಮಾಡುವ ಯೋಗೇಶ್ ಶರ್ಮಾ ಅವರ ಪ್ಯಾನ್ ಕಾರ್ಡ್ನಿಂದ ಇಷ್ಟು ಬೃಹತ್ ಮೊತ್ತದ ವಹಿವಾಟು ನಡೆದಿದ್ದು, ತಮ್ಮ ಪ್ಯಾನ್ ಕಾರ್ಡ್ ದುರ್ಬಳಕೆಯಾಗಿರುವ ಕುರಿತು ಅವರು ತಿಳಿಸಿದ್ದಾರೆ.