ಬೆಂಗಳೂರು: 2024-25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷಾ-1ರ ಫಲಿತಾಂಶ ಇಂದು ಪ್ರಕಟವಾಗಿದೆ. ತೇರ್ಗಡೆಯಾಗದವರು ಹಾಗೂ ಉತ್ತಮ ಫಲಿತಾಂಶ ಬಯಸಿ ಮರುಪರೀಕ್ಷೆ ಬಯಸುವ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ಹಾಗೂ ಪರೀಕ್ಷೆ-3 ದಿನಾಂಕ ನಿಗದಿಪಡಿಸಿ, ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಪ್ರಕಟಿಸಿದೆ.
ಎಸ್ಎಸ್ಎಲ್ಸಿ ಪರೀಕ್ಷೆ-2 ಮೇ 26ರಿಂದ ಜೂನ್ 2ರವರೆಗೆ ಹಾಗೂ ಪರೀಕ್ಷೆ-3 ಜೂ. 23ರಿಂದ 30ರವರೆಗೆ ನಡೆಯಲಿದೆ.
ಮೊದಲ ಪರೀಕ್ಷೆ ಬರೆದು ಉತ್ತೀರ್ಣರಾಗದ ವಿದ್ಯಾರ್ಥಿಗಳಿಗೆ ಈ ಬಾರಿ ಪರೀಕ್ಷಾ ಶುಲ್ಕವಿಲ್ಲ.
ಉತ್ತಮ ಫಲಿತಾಂಶ ಬಯಸುವ ವಿದ್ಯಾರ್ಥಿಗಳು, ಪುನಾರವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ನಿಗದಿತ ಪರೀಕ್ಷಾ ಶುಲ್ಕ ಪಾವತಿಸಬೇಕಿದೆ.
ಸ್ಕ್ಯಾನ್ ಪ್ರತಿ, ಮರುಎಣಿಕೆ ಮತ್ತು ಮೌಲ್ಯಮಾಪನಕ್ಕಾಗಿ ಇಲಾಖೆಯ ಜಾಲತಾಣ kseab.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು.
ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಮೇ 2ರಿಂದ 7ರವರೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಆನ್ಲೈನ್ ಬ್ಯಾಂಕಿಂಗ್ ಸೌಲಭ್ಯವಿಲ್ಲದವರು ಆನ್ಲೈನ್ನಲ್ಲಿ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಆಫ್ ಲೈನ್ ಚಲನ್ ಡೌನ್ ಲೋಡ್ ಮಾಡಿಕೊಂಡು ಶುಲ್ಕವನ್ನು ಮೇ 2ರಿಂದ 8ವರೆಗೆ ಬ್ಯಾಂಕ್ ನಲ್ಲಿ ಪಾವತಿಸಬೇಕು.
ಉತ್ತರಪತ್ರಿಕೆಗಳ ಮರುಎಣಿಕೆಗೆ ಮತ್ತು ಮರುಮೌಲ್ಯಮಾಪನಕ್ಕೆ ಮೇ 4ರಿಂದ 11ರವರೆಗೆ ಆನ್ಲೈನ್ ಮೂಲಕ ಹಾಗೂ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸುವವರು ಮೇ 4ರಿಂದ 12 ರವರೆಗೆ ನಿಗದಿತ ಶುಲ್ಕ ಪಾವತಿಸಬೇಕೆಂದು ಮಂಡಳಿ ತಿಳಿಸಿದೆ.