ಬೆಳಗಾವಿ: ಕುಂದಾನಗರಿ ಬೆಳಗಾವಿಯ ಆರಾಧ್ಯ ದೈವ, ‘ದಕ್ಷಿಣ ಕಾಶಿ’ ಎಂದೇ ಪ್ರಖ್ಯಾತವಾಗಿರುವ ಶ್ರೀ ಕಪಿಲೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ಭಕ್ತಿ ಸಾಗರವೇ ಹರಿಯುತ್ತಿದೆ. ಕಾಶಿಯ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದರೆ ಎಷ್ಟು ಪುಣ್ಯ ಲಭಿಸುತ್ತದೆಯೋ, ಅಷ್ಟೇ ಪುಣ್ಯ ಇಲ್ಲಿನ ದರ್ಶನದಿಂದ ಸಿಗುತ್ತದೆ ಎಂಬುದು ಭಕ್ತರ ಗಾಢ ನಂಬಿಕೆ.
ಕಪಿಲ ಮುನಿಗಳು ಇಲ್ಲಿ ಶಿವನನ್ನು ಕುರಿತು ತಪಸ್ಸು ಮಾಡಿ, ಲಿಂಗವನ್ನು ಪ್ರತಿಷ್ಠಾಪಿಸಿದರು ಎಂಬ ಐತಿಹ್ಯವಿದೆ. ಹಾಗಾಗಿ ಈ ಕ್ಷೇತ್ರಕ್ಕೆ ‘ಕಪಿಲೇಶ್ವರ’ ಎಂಬ ಹೆಸರು ಬಂದಿದೆ. 12ನೇ ಶತಮಾನದ ಶಾಸನಗಳಲ್ಲಿಯೂ ಈ ದೇವಾಲಯದ ಉಲ್ಲೇಖವಿದ್ದು, ಇದು ನಗರದ ಅತ್ಯಂತ ಪುರಾತನ ಮತ್ತು ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿದೆ.

ಅಭಿಷೇಕ ಮತ್ತು ಪೂಜೆ: ಶಿವರಾತ್ರಿಯಂದು ಮುಂಜಾನೆಯಿಂದಲೇ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ ಹಾಗೂ ಬಿಲ್ವಾರ್ಚನೆಗಳು ನಿರಂತರವಾಗಿ ನಡೆಯುತ್ತವೆ.
ದರ್ಶನ ಭಾಗ್ಯ: ಬೆಳಗಾವಿ ಜಿಲ್ಲೆ ಮಾತ್ರವಲ್ಲದೆ ನೆರೆರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗೋವಾದಿಂದಲೂ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಭೋಲೇನಾಥನ ದರ್ಶನ ಪಡೆಯುತ್ತಾರೆ.
ಜಾಗರಣೆ: ರಾತ್ರಿಯಿಡೀ ಭಜನೆ, ಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಭಕ್ತರು ಶಿವನ ನಾಮಸ್ಮರಣೆ ಮಾಡುತ್ತಾ ಜಾಗರಣೆ ಮಾಡುತ್ತಾರೆ.
ಭಕ್ತರಿಗೆ ಸೌಲಭ್ಯ;ದೇವಾಲಯದ ಆಡಳಿತ ಮಂಡಳಿಯು ಭಕ್ತರಿಗಾಗಿ ಕುಡಿಯುವ ನೀರು, ಪ್ರಸಾದ ವಿನಿಯೋಗ ಹಾಗೂ ವಿಶೇಷ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಿದೆ. ಪಟಾಕಿಗಳ ಆರ್ಭಟವಿಲ್ಲದೆ, ಭಕ್ತಿಯ ಪರಾಕಾಷ್ಠೆಯೊಂದಿಗೆ ದಕ್ಷಿಣ ಕಾಶಿಯಲ್ಲಿ ಈ ಬಾರಿ ಶಿವರಾತ್ರಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿದೆ.
ವರದಿ :ಮಹಾಂತೇಶ್ ಎಸ್ ಹುಲಿಕಟ್ಟಿ




