ಹೈದರಾಬಾದ್ : ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯಲ್ಲಿ ಕಲುಷಿತ ಹಾಲು ಸೇವಿಸಿ 13 ಮಂದಿ ಸಾವನ್ನಪ್ಪಿದ್ದಾರೆ.. ಈ ದುರಂತ ಘಟನೆಯಲ್ಲಿ 7 ಮಂದಿಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ರಾಜಮಹೇಂದ್ರವರಂ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ಹಾಲಿನಲ್ಲಿ ಕಲಬೆರಿಕೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಕಲುಷಿತ ಹಾಲು ಸೇವಿಸಿದ ಬಳಿಕ ಹಲವು ಜನರು ತೀವ್ರ ಅಸ್ವಸ್ಥರಾಗಿದ್ದಾರೆ. ಈ ಘಟನೆ ಲಾಲಚೆರುವು ಪ್ರದೇಶದ ಚೌಡೇಶ್ವರಿ ನಗರ ಮತ್ತು ಸ್ವರೂಪ್ ನಗರ ಪ್ರದೇಶಗಳಲ್ಲಿ ನಡೆದಿದೆ. ಸ್ಥಳೀಯವಾಗಿ ಪೂರೈಸಲಾಗಿದ್ದ ಹಾಲನ್ನು ಕುಡಿದ ಬಳಿಕ ಜನರಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದ್ದು, ಕೆಲವೇ ಗಂಟೆಗಳಲ್ಲಿ ಅವರ ಆರೋಗ್ಯ ಹದಗೆಟ್ಟಿದೆ.
ಕಲುಷಿತ ಹಾಲು ಸೇವಿಸಿದವರಲ್ಲಿ ಮೂತ್ರ ಕಟ್ಟುವಿಕೆ, ತೀವ್ರ ವಾಂತಿ, ಹೊಟ್ಟೆನೋವು ಹಾಗೂ ದೇಹದಲ್ಲಿ ದುರ್ಬಲತೆ ಸೇರಿದಂತೆ ಹಲವು ಲಕ್ಷಣಗಳು ಕಾಣಿಸಿಕೊಂಡಿವೆ. ಕೆಲವು ರೋಗಿಗಳಲ್ಲಿ ಕಿಡ್ನಿ ಸಂಬಂಧಿತ ಸಮಸ್ಯೆಗಳು ಉಂಟಾಗಿರುವುದರಿಂದ ಅವರಿಗೆ ತಕ್ಷಣವೇ ಡಯಾಲಿಸಿಸ್ ಚಿಕಿತ್ಸೆ ಅಗತ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅಸ್ವಸ್ಥರಾದವರನ್ನು ರಾಜಮಹೇಂದ್ರವರಂ ಜಿಲ್ಲೆಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಮೊದಲ ಬಾರಿ ಫೆಬ್ರವರಿ 27ರಂದು ಬೆಳಕಿಗೆ ಬಂದಿದೆ. ಆ ದಿನ ಹಲವರು ಒಂದೇ ರೀತಿಯ ಲಕ್ಷಣಗಳೊಂದಿಗೆ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ವೈದ್ಯರು ಪರೀಕ್ಷೆ ನಡೆಸಿದ ಬಳಿಕ ಎಲ್ಲರೂ ಒಂದೇ ಮೂಲದಿಂದ ಬಂದ ಹಾಲನ್ನು ಸೇವಿಸಿರುವುದು ತಿಳಿದುಬಂದಿದೆ.
ಘಟನೆಯ ನಂತರ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ತಕ್ಷಣವೇ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಾಲು ಪೂರೈಸುತ್ತಿದ್ದ ಘಟಕಗಳು ಮತ್ತು ಡೈರಿ ಕೇಂದ್ರಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಹಾಲಿನ ಗುಣಮಟ್ಟವನ್ನು ಪರೀಕ್ಷಿಸಲು ವಿವಿಧ ಮಾದರಿಗಳನ್ನು ಸಂಗ್ರಹಿಸಲಾಗಿದೆ.
ಹಾಲಿನ ಮಾದರಿಗಳೊಂದಿಗೆ ತುಪ್ಪ, ಪನ್ನೀರ್, ನೀರು ಮತ್ತು ವಿನಿಗರ್ ಸೇರಿದಂತೆ ಹಲವು ಉತ್ಪನ್ನಗಳ ಮಾದರಿಗಳನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಉತ್ಪನ್ನಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಅಥವಾ ಹಾನಿಕಾರಕ ಪದಾರ್ಥಗಳನ್ನು ಬಳಸಲಾಗಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಪರೀಕ್ಷಾ ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



