ಸಿರುಗುಪ್ಪ: ನಗರದ ಶ್ರೀ ವಿಷ್ಣು ವಿಲಾಸ ಸೌಹಾರ್ದ ಪತ್ತಿನ ಸಹಕಾರಿ ಕಚೇರಿಯಲ್ಲಿ ನಡೆದ 14ನೇ ವಾರ್ಷಿಕ ಸಾಮಾನ್ಯ ಸಭೆಯನ್ನು ಸಹಕಾರಿಯ ಅಧ್ಯಕ್ಷ ಹೆ.ಜೆ.ಹನುಮಂತಯ್ಯ ಅವರು ಉದ್ಘಾಟಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಸಹಕಾರಿಯ ಎಲ್ಲಾ ಸದಸ್ಯರು ನಮ್ಮ ಮೇಲಿಟ್ಟಿರುವ ವಿಶ್ವಾಸ, ನುರಿತ ಆಡಳಿತ ಮಂಡಳಿ, ಕಠಿಣ ಪರಿಶ್ರಮದ ಸಿಬ್ಬಂದಿಗಳಿಂದಾಗಿ ನಮ್ಮ ಸಹಕಾರಿಯು 14 ವರ್ಷಗಳನ್ನು ಪೂರೈಸಿ ಯಶಸ್ಸು ಕಂಡಿದೆ.
ಜೊತೆಗೆ ನಮ್ಮ ಸಹಕಾರಿಯಿಂದ ಬೇಸಿಗೆಯಲ್ಲಿ ನೀರಿನ ಅರವಟಿಗೆ, ಹೆಚ್ಚಿನ ಅಂಕಗಳನ್ನು ಗಳಿಸಿದ ಪ್ರತಿಭಾವಂತ ಮಕ್ಕಳಿಗೆ ಸನ್ಮಾನ, ಇತ್ತೀಚೆಗೆ ನಡೆದ ರಕ್ತದಾನ ಶಿಬಿರದಂತಹ ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲೂ ಹಲವಾರು ಕಾರ್ಯಕ್ರಮಗಳನ್ನು ಮಾಡುವಲ್ಲಿ ಸಹಕಾರಿಯ ಎಲ್ಲಾ ನಿರ್ದೇಶಕರು, ಸದಸ್ಯರು, ಬ್ಯಾಂಕಿನ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿಗಳ ಪಾತ್ರವು ಪ್ರಮುಖವಾಗಿದೆ.
ಈಗಾಗಲೇ ಸಿಂಧನೂರು, ಬಳ್ಳಾರಿ ರಾಯಚೂರುಗಳಲ್ಲಿ ವಿಷ್ಣು ವಿಲಾಸ ಸೌಹಾರ್ದ ಪತ್ತಿನ ಸಹಕಾರಿಯಿಂದ ಶಾಖೆಗಳನ್ನು ಆರಂಭಿಸಲಾಗಿದ್ದು, ಮುಂದುವರೆದು ಪ್ರಸಕ್ತ ವರ್ಷದಲ್ಲಿ ಹೊಸಪೇಟೆ ಮತ್ತು ಸಂಡೂರಿನಲ್ಲಿಯೂ ನೂತನ ಶಾಖೆಗಳನ್ನು ಪ್ರಾರಂಭಿಸಲು ತಮ್ಮೆಲ್ಲರ ಅನುಮತಿಗೆ ಕೋರುತ್ತಿದ್ದೇನೆ.
ಕಳೆದ ಮೂರು ವರ್ಷಗಳಿಂದ ಸಹಕಾರಿಯು ಲಾಭದಾಯಕದಲ್ಲಿದ್ದು ಸದಸ್ಯರಿಗೆ ಶೇ.20ರಷ್ಟು ಲಾಭಾಂಶವನ್ನು ನೀಡಲಾಗುತ್ತಿದ್ದು, ಸಹಕಾರಿಯ ಅನುಕೂಲಗಳನ್ನು ಪಡೆಯಬೇಕೆಂದು ತಿಳಿಸಿದರು.
ಮುಖ್ಯ ಕಾರ್ಯನಿರ್ವಾಹಕ ಅನಿಲ್‌ಕುಮಾರು ಅವರು ಮಾತನಾಡಿ ಸಹಕಾರಿ ಒಟ್ಟು 11 ಕೋಟಿ 23 ಲಕ್ಷ ಆದಾಯವನ್ನು ಗಳಿಸಿದ್ದು ಠೇವಣಿದಾರರಿಗೆ ಬಡ್ಡಿ ಮತ್ತು ಇತರೆ ಖರ್ಚುಗಳನ್ನು ಪಾವತಿಸಿ ನಿವ್ವಳ ಲಾಭ 2 ಕೋಟಿ 40 ಲಕ್ಷದಷ್ಟು ಲಾಭಗಳಿಸಿದ್ದು ಮುಂದಿನ ಅನುಮೋದನೆಗೆ ಕೋರಲಾಗುತ್ತಿದೆ ಎಂದು ತಿಳಿಸಿದರು.
ಇದೇ ವೇಳೆ ನಿರ್ದೇಶಕರಾದ ನಾಗರಾಜ, ಶ್ರೀನಿವಾಸ, ಬದ್ರಿನಾಥ, ಸೂರ್ಯಪ್ರಕಾಶ, ಲೆಕ್ಕ ಪರಿಶೋಧಕ ನಾಗನಗೌಡ ಸೇರಿದಂತೆ ಸಹಕಾರಿಯ ಸದಸ್ಯರು, ಆಡಳಿತಾಧಿಕಾರಿಗಳು, ಸಿಬ್ಬಂದಿಗಳಿದ್ದರು.
ವರದಿ : ಶ್ರೀನಿವಾಸ ನಾಯ್ಕ




