ಬೆಳಗಾವಿ: ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಒಂದೇ ಬಾರಿ. ಅದು ಕರ್ನಾಟಕದ ಬೆಳಗಾವಿಯಲ್ಲಿ. ಈ ಐತಿಹಾಸಿಕ ಕಾರ್ಯಕ್ರಮಕ್ಕೀಗ ಶತಮಾನದ ಸಂಭ್ರಮ.
ಬ್ರಿಟೀಷರ ಕಪಿಮುಷ್ಠಿಯಿಂದ ಭಾರತವನ್ನು ಪಾರು ಮಾಡಿದವರಲ್ಲಿ ಮಹಾತ್ಮ ಗಾಂಧಿ ಅಗ್ರಗಣ್ಯರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಾತ್ರವನ್ನೂ ಮರೆಯುವಂತಿಲ್ಲ. ಬಾಪೂಜಿ ಕೂಡ ಅದೇ ಕಾಂಗ್ರೆಸ್ ವೇದಿಕೆಯ ಮೂಲಕವೇ ಆಂಗ್ಲರ ವಿರುದ್ಧ ಚಳುವಳಿ ನಡೆಸಿದ್ದರು. ಹೀಗೆ 1924 ಡಿ.26, 27 ರಂದು ಬೆಳಗಾವಿಯಲ್ಲಿ ಗಾಂಧೀಜಿ ಅಧ್ಯಕ್ಷತೆಯಲ್ಲಿ ಎರಡು ದಿನ ಕಾಂಗ್ರೆಸ್ ಅಧಿವೇಶನ ಯಶಸ್ವಿಯಾಗಿ ಜರುಗಿತ್ತು. ಅವತ್ತಿನ ಮಟ್ಟಿಗೆ ಅದು ಇಡೀ ದೇಶ ಅಷ್ಟೇ ಅಲ್ಲದೇ ಬ್ರಿಟಿಷರ ಗಮನವನ್ನೂ ಸೆಳೆದಿತ್ತು.
ಬಾಪೂಜಿ ಜೊತೆಗೆ ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸರೋಜಿನಿ ನಾಯ್ಡು, ಮೌಲಾನಾ ಅಬ್ದುಲ್ ಕಲಾಂ ಆಜಾದ್ ಸೇರಿ ಹಲವಾರು ರಾಷ್ಟ್ರೀಯ ನಾಯಕರ ದಂಡೇ ಬೆಳಗಾವಿಗೆ ಆಗಮಿಸಿತ್ತು. ಅಧಿವೇಶನದ ಸ್ವಾಗತ ಸಮಿತಿ ಅಧ್ಯಕ್ಷರಾದ ಗಂಗಾಧರರಾವ್ ದೇಶಪಾಂಡೆ ಮತ್ತು ಅವರ ತಂಡ, ನಾ.ಸು.ಹರ್ಡೇಕರ್ ಸ್ಥಾಪಿಸಿದ್ದ ರಾಷ್ಟ್ರೀಯ ಸೇವಾದಳ ಸೇರಿ ಮತ್ತಿತರ ನಾಯಕರ ಅವಿರತ ಶ್ರಮದಿಂದ ಬೆಳಗಾವಿ ಅಧಿವೇಶನ ಯಶಸ್ವಿಯಾಗಿತ್ತು.
₹2.20 ಲಕ್ಷ ಖರ್ಚು: ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕೆ 2,20,057 ರೂಪಾಯಿ ಖರ್ಚಾಗಿತ್ತು. ಅಧಿವೇಶನಕ್ಕೆ ಸಂಗ್ರಹವಾಗಿದ್ದು 2,20,829 ರೂಪಾಯಿ. ಎಲ್ಲಾ ಖರ್ಚು ತೆಗೆದು 772 ರೂ. ಹಣ ಉಳಿದಿತ್ತು. ಆ ಹಣವನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಬಳಿ ಉಳಿಸಿಕೊಳ್ಳಲಾಗಿತ್ತು.
ಶತಮಾನೋತ್ಸವಕ್ಕೆ ₹25 ಕೋಟಿ ಬಿಡುಗಡೆ: ಡಿ.26, 27ರಂದು ನಡೆಯಲಿರುವ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕೆ ಈಗಾಗಲೇ 25 ಕೋಟಿ ರೂ. ಸರ್ಕಾರ ಬಿಡುಗಡೆ ಮಾಡಿದೆ ಎಂದು ಶತಮಾನೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರೂ ಆಗಿರುವ ಸಚಿವ ಹೆಚ್.ಕೆ.ಪಾಟೀಲ ತಿಳಿಸಿದ್ದಾರೆ. ಅಲ್ಲದೇ 4 ಕೋಟಿ ರೂ ವೆಚ್ಚದಲ್ಲಿ ಸುವರ್ಣ ವಿಧಾನಸೌಧದ ಬಳಿ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಲಾಗುತ್ತಿದೆ. ಅಧಿವೇಶನ ನಡೆದ ಸ್ಥಳ ವೀರಸೌಧ, ಹುದಲಿ ಸೇರಿ ಜಿಲ್ಲೆಯಲ್ಲಿನ ಗಾಂಧೀಜಿ ಕುರುಹುಗಳ ಅಭಿವೃದ್ಧಿಗೂ ಸರ್ಕಾರ ಮುಂದಾಗಿದೆ. ವರ್ಷವಿಡೀ ‘ಗಾಂಧಿ ಭಾರತ’ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇನ್ನೂ ಹೆಚ್ಚು ಖರ್ಚಾಗುವ ಸಾಧ್ಯತೆಯಿದೆ.