ತುಮಕೂರು : ರಾಜ್ಯದಲ್ಲಿ ಇತ್ತೀಚೆಗೆ ಪ್ರಾಣಿ ಪಕ್ಷಿಗಳನ್ನು ಕೊಲ್ಲುವುದು ಸಾಮಾನ್ಯವಾಗಿದೆ. ಈ ಹಿಂದೆ ಮಲೆ ಮಹದೇವಪ್ಪನ ಬೆಟ್ಟದಲ್ಲಿ ಐದು ಹುಲಿಗಳಿಗೆ ವಿಷವಿಟ್ಟು ಕೊಲ್ಲಲಾಗಿತ್ತು. ಇದೀಗ ತುಮಕೂರಿನ ಮಧುಗಿರಿ ತಾಲೂಕಿನಲ್ಲಿ 19 ನವಿಲುಗಳು ಸಾವನ್ನಪ್ಪಿದ್ದು, ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಮಧುಗಿರಿ ತಾಲೂಕಿನ ಮಿಡಿಗೇಶಿಯ ಹನುಮಂತಪುರ ಗ್ರಾಮದ ಕೆರೆ ಕೋಡಿ ನೀರು ಹರಿಯುವ ಪಕ್ಕದ ಜಮೀನಲ್ಲಿ ಸುಮಾರು 19 ನವಿಲುಗಳು ನಿಗೂಢವಾಗಿ ಸಾವನ್ನಪ್ಪಿದ್ದು, ಆಗಸ್ಟ್ 1 ರಂದು ರಾತ್ರಿ ಸ್ಥಳೀಯರು ನಡೆದುಕೊಂಡು ಹೋಗುತ್ತಿರುವಾಗ ಬೆಳಕಿಗೆ ಬಂದಿದೆ.
ಸತ್ತಿರುವ ನವಿಲುಗಳ ಪೈಕಿ ಐದು ಗಂಡು ಹಾಗೂ 14 ಹೆಣ್ಣು ನವಿಲುಗಳು ಎಂದು ಅರಣ್ಯಾಧಿಕಾರಿಗಳು ದೃಢಪಡಿಸಿದ್ದಾರೆ. ಸದ್ಯ ಸತ್ತ ನವಿಲುಗಳನ್ನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ನವಿಲುಗಳ ಸಾವಿಗೆ ಕಾರಣ ಗೊತ್ತಾಗಲಿದೆ.
ಇನ್ನು ಅರಣ್ಯ ಇಲಾಖೆಯ ಎಸಿಎಫ್ ಮಲ್ಲಿಕಾರ್ಜುನ್, ವಲಯ ಅರಣ್ಯ ಅಧಿಕಾರಿ ಸುರೇಶ್ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದು, ಮೇಲ್ನೋಟಕ್ಕೆ ವಿಷಾಹಾರ ತಿಂದು ಸಾವನ್ನಪ್ಪಿದೆ ಎಂದು ಹೇಳಲಾಗಿದೆ.




