ನವದೆಹಲಿ: ಪುತ್ರ ಅಪಘಾತದಲ್ಲಿ ಸಾವಿಗೀಡಾಗಿದ್ದಾನೆ ಎಂದು ವಕೀಲ ಮತ್ತು ವೈದ್ಯರ ಜೊತೆಗೂಡಿ ಖೊಟ್ಟಿ ದಾಖಲೆ ಸೃಷ್ಟಿಸಿದ ವ್ಯಕ್ತಿಯೊಬ್ಬ, 2 ಕೋಟಿ ರೂಪಾಯಿ ವಿಮೆ ಹಣ ಪಡೆಯಲು ಯತ್ನಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಇಲ್ಲಿನ ನಜಾಫ್ಗಢದ ನಿವಾಸಿ ಸತೀಶ್ಕುಮಾರ್ ಎಂಬಾತ ವಿಮೆ ಹಣಕ್ಕಾಗಿ ಪುತ್ರನ ಸಾವಿನ ಕಥೆ ಕಟ್ಟಿ ಸಿಕ್ಕಿಬಿದ್ದ ಆರೋಪಿ. ಮಾರ್ಚ್ 5 ರಂದು ಪೊಲೀಸ್ ಠಾಣೆಗೆ ಕರೆ ಮಾಡಿ ಅಪಘಾತವಾದ ಬಗ್ಗೆ ಮಾಹಿತಿ ನೀಡಿದ್ದಾನೆ. ತಮ್ಮ ಮಗ ಗಗನ್ಗೆ ಬೈಕ್ ಅಪಘಾತದಲ್ಲಿ ತಲೆಗೆ ತೀವ್ರ ಪೆಟ್ಟು ಬಿದ್ದಿದೆ ಎಂದು ತಿಳಿಸಿದ್ದ. ಬಳಿಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ ಎಂದು ಹೇಳಿಕೊಂಡಿದ್ದ.
ದೂರುದಾರ ಮತ್ತು ಆತನ ಮಗ ಲಿಖಿತ ದೂರು ದಾಖಲಿಸದೆ, ವೈದ್ಯಕೀಯ-ಕಾನೂನು ಪ್ರಕರಣ (ಎಂಎಲ್‌ಸಿ) ವರದಿಯನ್ನು ಪಡೆಯದೆ ಠಾಣೆಯಿಂದ ಹೊರಟುಹೋಗಿದ್ದರು. ಮಾರ್ಚ್ 11 ರಂದು ಪೊಲೀಸರು ಕುಮಾರ್ ಅವರನ್ನು ಸಂಪರ್ಕಿಸಿದಾಗ, ಗಗನ್ ಮಾರ್ಚ್ 6 ರಂದು ನಿಧನರಾದರು. ಉತ್ತರ ಪ್ರದೇಶದ ಹಾಪುರದ ಗರ್ಗಂಗಾದಲ್ಲಿ ಮರಣೋತ್ತರ ಪರೀಕ್ಷೆ ಅಥವಾ ಪೊಲೀಸರಿಗೆ ಮಾಹಿತಿ ನೀಡದೆ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಆತ ತಿಳಿಸಿದ್ದ ಎಂದು ಉಪ ಪೊಲೀಸ್ ಆಯುಕ್ತ (ದ್ವಾರಕಾ) ಅಂಕಿತ್ ಸಿಂಗ್ ಹೇಳಿದ್ದಾರೆ.
ಅಧಿಕಾರಿ ಮೇಲೆಯೇ ಸುಳ್ಳು ಕೇಸ್: ಬಳಿಕ, ಭೀಕರ ಅಪಘಾತದ ಬಗ್ಗೆ ತನಿಖೆ ನಡೆಸುವಲ್ಲಿ ವಿಫಲ ಆರೋಪ ಹೊರಿಸಿ ತನಿಖಾಧಿಕಾರಿ ವಿರುದ್ಧವೇ ಕೇಸ್ ದಾಖಲಿಸಿದ್ದ. ಅಪಘಾತ ಪ್ರಕರಣ ಮತ್ತು ಅಧಿಕಾರಿ ವಿರುದ್ಧದ ದೂರಿನಲ್ಲಿ ವ್ಯತ್ಯಾಸ ಉಂಟಾಗಿದ್ದನ್ನು ಪೊಲೀಸರು ಗಮನಿಸಿದ್ದರು.
“ಅಪಘಾತ ಸ್ಥಳದಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ್ದೇವೆ. ಅದರಲ್ಲಿ ಗಗನ್ ಮತ್ತು ಇನ್ನೊಬ್ಬ ವ್ಯಕ್ತಿ ಅಪಘಾತ ನಡೆಸಿದ್ದು ಕಂಡುಬಂದಿದೆ. ಇದೊಂದು ನಕಲಿ ಪ್ರಕರಣ ಎಂದು ಅರಿತು, ಆರೋಪಿಯನ್ನು ವಿಚಾರಣೆ ನಡೆಸಿದಾಗ, ಕರಾಮತ್ತು ಹೊರಬಿದ್ದಿತು. ಇದೊಂದು ನಕಲಿ ಸಾವು ಎಂದು ಅವರು ಒಪ್ಪಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಪಘಾತಕ್ಕೂ ಮುನ್ನ ವೈದ್ಯರು ಗಗನ್ ಅವರ ತಲೆಗೆ ಸಣ್ಣ ಗಾಯ ಮಾಡಿ ಬ್ಯಾಂಡೇಜ್ ಹಾಕಿದ್ದರು. ಆ್ಯಕ್ಸಿಡೆಂಟ್ ವೇಳೆ ಅದು ನಿಜ ಎಂದು ಸಾಬೀತಾಗಲು ಹೀಗೆ ಮಾಡಲಾಗಿತ್ತು. ಬಳಿಕ ಆತ ಮೃತಪಟ್ಟಿದ್ದಾಗಿ ಗಗನ್ ಹೆಸರಿನಲ್ಲಿ 2 ಕೋಟಿ ರೂಪಾಯಿ ವಿಮಾ ಹಣವನ್ನು ಪಡೆಯುವುದು ಸಂಚಿನ ಭಾಗವಾಗಿತ್ತು. ಹಾಪುರ್‌ನಲ್ಲಿ ಗಗನ್ ಅವರ ಅಂತ್ಯಕ್ರಿಯೆ ನಡೆದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ.