ಈಜಿಪ್ಟ್ ನ ಸಮುದ್ರದಾಳದಲ್ಲಿ 2 ಸಾವಿರ ವರ್ಷ ಹಳೆಯ ಪ್ರತಿಮೆ ಪತ್ತೆಯಾಗಿದೆ. ಸಮುದ್ರದ ಕೆಳಕ್ಕೆ ಕಲ್ಲಿನ ಕಟ್ಟಡ, ಕಲ್ಲು ಕೆತ್ತನೆಯ ಕೊಳ, ಪ್ರಾಚೀನ ನೀರು ಸಂಗ್ರಹಣೆ ಕೊಳ, ಕೃಷಿಗಾಗಿ ಬಳಸಲಾಗುತ್ತಿದ್ದ ಜಲಾಶಯಸೇರಿದಂತೆ ಇನ್ನಿತರ ಪ್ರಾಚೀನ ವಸ್ತುಗಳು ಪತ್ತೆಯಾಗಿದೆ ಎಂದು ವರದಿಯಾಗಿದೆ.
ನೀರಿನ ಅಡಿಯಲ್ಲಿ ಪತ್ತೆಯಾದ ಮೂರ್ತಿಗಳು, ಪ್ರತಿಮೆಗಳನ್ನು ಪುರಾತತ್ವಶಾಸ್ತ್ರಜ್ಞರು ಹೊರಕ್ಕೆ ತೆಗೆದಿದ್ದು, ಕೆಲವೊಂದನ್ನು ಹೊರತೆಗೆಯಲು ಅಸಾದ್ಯ ಎಂದು ತಿಳಿಸಿದ್ದಾರೆ.
ಅಲೆಕ್ಸಾಂಡ್ರಿಯಾ ಬಳಿಯ ಅಬು ಕಿರ್ ಕೊಲ್ಲಿಯ ಕರಾವಳಿಯಲ್ಲಿ ಸುಮಾರು 2000 ವರ್ಷ ಹಳೆಯ ಕಲಾಕೃತಿಯೊಂದನ್ನು ಹುಡುಕಿ ಹೊರಕ್ಕೆ ತೆಗೆಯಲಾಗಿದೆ.
ಈ ಪ್ರತಿಮೆ ಟಾಲೆಮಿಕ್, ಅಥವಾ ರೋಮ್ ಅವಧಿಗೂ ಹಳೆಯದ್ದಾಗಿದ್ದು, ಇದೊಂದು ಪಾದ್ರಿಯ ಆಕೃತಿ ಎಂದು ಹೇಳಲಾಗುತ್ತಿದೆ ಆದರೆ ಈ ಕಲಾಕೃತಿಯ ತಲೆಯ ಭಾಗ ತುಂಡಾಗಿದೆ.
ಸಾವಿರಾರು ವರ್ಷಗಳಿಂದ ಸಮುದ್ರದ ನೀರಿನ ಒಳಗೆಯೇ ಇದ್ದಿದ್ದರಿಂದ ಆಕೃತಿಯ ಆಕಾರ ವಿರೂಪಗೊಂಡಿದೆ. ಕ್ರೇನ್ ಮೂಲಕ ಸಮುದ್ರದಿಂದ ಹೊರತೆಗೆಯಲಾಗಿದೆ.
ಈ ಪ್ರತಿಮೆಗಳನ್ನು ಹೊರಕ್ಕೆ ತೆಗೆಯಲು ಸುಮಾರು ಒಂದು ದಿನಕ್ಕೂ ಹೆಚ್ಚಿನ ಕಾರ್ಯಾಚರಣೆ ನಡೆಯಿತು. ಇಲ್ಲಿ ಸಿಕ್ಕ ಪ್ರತಿಮೆಗಳನ್ನು ಅಲೆಕ್ಸಾಂಡ್ರಿಯಾದ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗುತ್ತದೆ.




