ಸೇಡಂ: ವಿಶ್ವವಿಖ್ಯಾತ ಯಾನಾಗುಂದಿಯ ಮಾತಾ ಮಾಣಿಕೇಶ್ವರಿ ಅಮ್ಮನವರು ನೆಲೆಸಿದ ಮಾಣಿಕ್ಯಗಿರಿಯನ್ನು ಟ್ರಸ್ಟ್ ಸದಸ್ಯರು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಮುಂದೊಂದು ದಿನ ಬೆಟ್ಟವನ್ನೆ ಮಾರಾಟ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ, ಪತ್ರಕರ್ತ ಶಿವಕುಮಾರ ಅಪ್ಪಾಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಮಾತಾ ಮಾಣಿಕೇಶ್ವರಿ ಅಮ್ಮನವರು ಶಿವೈಕ್ಯರಾದಾಗ ಮುಂದಿನ ಪೀಠಾಧಿಪತಿ ತಾನೇ ಎಂದು ಬಹಿರಂಗವಾಗಿ ಟ್ರಸ್ಟ್ ಕಾರ್ಯದರ್ಶಿ ಶಿವಯ್ಯಸ್ವಾಮಿ ಘೋಷಿಸಿಕೊಂಡಿದ್ದ, ನಂತರ ಭಕ್ತರು ವಿರೋಧಿಸಿದಾಗ ಕ್ಷಮೆ ಕೇಳಿದ. ಈಗ ವೀರಧರ್ಮಜ ಮಾತಾ ಮಾಣಿಕೇಶ್ವರಿ ಟ್ರಸ್ಟ್ ಅಧ್ಯಕ್ಷರಾಗಿ ನೇಮಿಸಿಕೊಂಡಿರುವುದಲ್ಲದೆ ತನ್ನ ಪುತ್ರನನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿಕೊಂಡಿದ್ದಾನೆ. ಇದಕ್ಕೂ ವಿರೋಧ ವ್ಯಕ್ತವಾದಾಗ ನೇಮಕಾತಿ ಕೈಬಿಟ್ಟಿದ್ದಾರೆ.
ಈ ರೀತಿಯ ಷಡ್ಯಂತ್ರಗಳನ್ನು ಅಮ್ಮನವರ ಜೀವಿತಾವಧಿಯಿಂದಲೇ ಮಾಡಿಕೊಂಡು ಬರುತ್ತಿರುವ ಶಿವಯ್ಯಸ್ವಾಮಿ ಆಶ್ರಮದ ಇಡೀ ಆಸ್ತಿಯನ್ನು ಲಪಟಾಯಿಸಲು ಸಂಚು ರೂಪಿಸಿದ್ದಾನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
ಆಂಧ್ರಪ್ರದೇಶದ ನಲಗೊಂಡದಿಂದ ಬಂದ ಶಿವಯ್ಯಸ್ವಾಮಿ ಮೊದಲಿಗೆ ತನ್ನ ಆಧಾರ ಕಾರ್ಡನಲ್ಲಿ ತನ್ನ ತಂದೆಯ ಹೆಸರಿನ ಬದಲಾಗಿ ಮಾತಾ ಮಾಣಿಕೇಶ್ವರಿ ಎಂದು ಬದಲಾಯಿಸಿಕೊಂಡಿದ್ದ, ಅಲ್ಲದೆ ಮಾತಾ ಮಾಣಿಕೇಶ್ವರಿಯವರ ಆಪ್ತನಂತೆ ವರ್ತಿಸಿ, ಪ್ರಮುಖ ಭಕ್ತರ ಸದುದ್ದೇಶಗಳನ್ನು ಅಮ್ಮನವರಿಗೆ ತಲುಪಿಸದೆ ದುರುದ್ದೇಶಪೂರಿತ ವಿಷಯಗಳನ್ನು ಮಾತ್ರ ಹೇಳಿ, ಅಮ್ಮನವರ ದಾರಿ ತಪ್ಪಿಸಿದ್ದ. ಅಷ್ಟಕ್ಕೆ ನಿಲ್ಲದ ಈತ ಮಾತಾ ಮಾಣಿಕೇಶ್ವರಿ ಅಮ್ಮನವರು ಅನಾರೋಗ್ಯದಲ್ಲಿದ್ದಾಗ ಸರಿಯಾದ ಸೌಲಭ್ಯ ಕಲ್ಪಿಸದೆ ತೀರಾ ಹೀನಾಯವಾಗಿ ನಡೆಸಿಕೊಂಡಿದ್ದ. ಚಿಕ್ಕ ಮಗು ಮಲಗುವ ಆಸನದಲ್ಲಿ ಅಮ್ಮನವರಿಗೆ ಮಲಗಲು ಸ್ಥಳ ನೀಡಿ, ಅಮ್ಮನವರ ಬೆನ್ನು ಮತ್ತು ಕಾಲುಗಳಿಗೆ ದೊಡ್ಡ ದೊಡ್ಡ ಗಾಯಗಳಾಗುವ ಮಟ್ಟಿಗೆ ತೊಂದರೆ ನೀಡಿದ್ದಾರೆ.
ಈಗಾಗಲೇ ಶಿವಯ್ಯಸ್ವಾಮಿಯಿಂದ ಅನ್ಯಾಯಕ್ಕೆ ಒಳಗಾದ ಅನೇಕ ಭಕ್ತರು ಶಿವಯ್ಯ ಹಠಾವೋ ಯಾನಾಗುಂದಿ ಬಚಾವೊ ಆಂದೋಲನಕ್ಕೆ ಮುಂದಾಗಿದ್ದು, ಕೂಡಲೇ ಈ ಕುರಿತು ಸರಕಾರ ಮಧ್ಯ ಪ್ರವೇಶಿಸಿ ಸಮಸ್ಯೆಯನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಶಿವಯ್ಯಸ್ವಾಮಿಯನ್ನು ಯಾನಾಗುಂದಿಯಿಂದ ತೆರಳುವಂತೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಭಾರತದಲ್ಲಿ ಅನೇಕ ಸೇವಾಶ್ರಮಗಳು ತಮ್ಮ ಗುರುಗಳ ಹೆಸರಿನಲ್ಲಿ ಸಾಮಾಜಿಕ ಪರಿವರ್ತನೆಯ ಕಾರ್ಯಗಳಲ್ಲಿ ತೊಡಗಿವೆ. ಆದರೆ ಯಾನಾಗುಂದಿಯ ಆಶ್ರಮದ ಟ್ರಸ್ಟಿಗಳ ಭ್ರಷ್ಟ ಮನೋಭಾವವದಿಂದ ಯಾವುದೇ ರೀತಿಯ ಸಾಮಾಜಿಕ ಸೇವಾ ಕಾರ್ಯಗಳು ನಡೆದಿಲ್ಲ. ಇರುವ ಶಾಲಾ ಕಾಲೇಜುಗಳು ಮುಚ್ಚುವ ಹಂತಕ್ಕೆ ತಲುಪಿವೆ. ದೇಶದ ನಾನಾ ಭಾಗಗಳಲ್ಲಿರುವ ಆಶ್ರಮಗಳು ನಿರ್ವಹಣೆ ಇಲ್ಲದೆ ಕೊಳಯುತ್ತಿವೆ. ಯಾನಾಗುಂದಿಯ ಆಶ್ರಮದಲ್ಲಿ ಅಹಿತಕರ ಘಟನೆಗಳು ಮನೆ ಮಾಡುತ್ತಿವೆ ಎಂದು ಆಪಾದಿಸಿದ್ದಾರೆ.
ಎರಡನೇ ಶ್ರಿಶೈಲವಾಗಿಸಿ
ಮಾತಾ ಮಾಣಿಕೇಶ್ವರಿಯವರು ತಮ್ಮ ಇಡೀ ಜೀವನದುದ್ದಕಕೂ ಅನ್ನ ನೀರು ಇಲ್ಲದೆ, ಅಹಿಂಸೆಯೇ ಪರಮ ಧರ್ಮ ಎಂದು ಸಾರಿದ ಮಹಾನ್ ಸಾಧ್ವಿ. ಅವರ ಜೀವನದ ರಹಸ್ಯವನ್ನು ಕಂಡುಹಿಡಿಯಲು ಬಂದ ಅಮೇರಿಕಾದ ವೈಜ್ಞಾನಿಗಳೇ ದಂಗಾಗಿದ್ದರು. ಶ್ರೀಶೈಲದ ಶ್ರೀ ಮಲ್ಲಿಕಾರ್ಜುನ ಸ್ವಾಮಿಯ ಪರಮ ಭಕ್ತೆಯಾಗಿದ್ದ ಮಾತಾ ಮಾಣಿಕೇಶ್ವರಿ ಅಮ್ಮನವರು ನೆಲೆನಿಂತು ಇಂದಿಗೂ ಸಹ ಭಕ್ತರಿಗೆ ಲಿಂಗರೂಪದಲ್ಲಿ ದರ್ಶನ ನೀಡುತ್ತಿದ್ದು, ಈ ಕ್ಷೇತ್ರವನ್ನು ಎರಡನೇ ಶ್ರೀಶೈಲವಾಗಿಸುವ ನಿಟ್ಟಿನಲ್ಲಿ ಸರಕಾರ ಗಮನಹರಿಸಬೇಕಿದೆ. ಇದರಿಂದ ಸುತ್ತಮುತ್ತಲಿನ ನೂರಾರು ಕಿ.ಮೀ. ಪ್ರದೇಶದ ಸಾರ್ವಜನಿಕರು, ವಿದ್ಯಾರ್ಥಿಗಳು, ರೈತರು ಉದ್ಧಾರವಾಗಲು ಸಾಧ್ಯವಿದೆ.
ವರದಿ ವೆಂಕಟಪ್ಪ ಕೆ ಸುಗ್ಗಾಲ್




