ನಿಖರ ದಾಳಿ ಹಂಚಿಕೊಂಡ ಭಾರತೀಯ ಸೇನೆ
ನವದೆಹಲಿ: ಪಹಲ್ಗಾಮ್ನಲ್ಲಿ ಪಾಕ್ ಪ್ರಾಯೋಜಿತ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದಲ್ಲಿನ ಉಗ್ರರ 9 ತಾಣಗಳನ್ನು ಪುಡಿಗಟ್ಟಿದೆ. ಈ ದಾಳಿಯಲ್ಲಿ ಹಲವು ಉಗ್ರರು ಮೃತಪಟ್ಟಿದ್ದಾಗಿ ಸೇನೆ ತಿಳಿಸಿದೆ. ಇದರ ಜೊತೆಗೆ, ತಾನು ನಡೆಸಿದ ದಾಳಿಯ ಚಿತ್ರ ಮತ್ತು ವಿಡಿಯೋಗಳನ್ನು ಒದಗಿಸಿದೆ.
ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ), ಜೈಶ್-ಎ- ಮೊಹಮದ್ (ಜೆಇಎಂ) ಉಗ್ರ ಸಂಘಟನೆಗಳಿಗೆ ಸೇರಿದ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ’ ಹೆಸರಿನಲ್ಲಿ ಈ ಕಾರ್ಯಾಚರಣೆ ನಡೆಸಿದೆ.
ಈ ಕಾರ್ಯಾಚರಣೆಯು ಬುಧವಾರ ಮಧ್ಯರಾತ್ರಿ 1.05ರಿಂದ 1.30ರೊಳಗೆ ಅಂದರೆ, ಕೇವಲ 25 ನಿಮಿಷದಲ್ಲಿ ನಡೆದಿದೆ. ಇಷ್ಟರಲ್ಲಿ 24 ಕ್ಷಿಪಣಿಗಳನ್ನು ಸಿಡಿಸಲಾಗಿದ್ದು, 9 ಉಗ್ರ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಭಾರತೀಯ ಸೇನೆ, ನೌಕಾದಳ, ವಾಯುಪಡೆಗಳು ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿವೆ ಎಂದು ಸೇನೆ ಹೇಳಿದೆ.
ಭಾರತೀಯ ಸೇನಾಪಡೆಗಳು ದಾಳಿ ನಡೆಸಿದ ಸ್ಥಳಗಳಿವು:
ಮುಜಫರಾಬಾದ್, ಕೋಟ್ಲಿ, ಬಹವಾಲ್ಪುರ್, ರಾವಲಕೋಟ್, ಚಕ್ ಸ್ವರಿ,ಭಿಂಬರ್, ನೀಲಂ ಕಣಿವೆ, ಝೇಲಂ, ಚಕ್ವಾಲ್
ಈ ಮೇಲಿನ ಸ್ಥಳಗಳಲ್ಲಿದ್ದ ಉಗ್ರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿ ಅವುಗಳನ್ನು ನಾಶಗೊಳಿಸಲಾಗಿದೆ. ಇವುಗಳು ಭಯೋತ್ಪಾದಕರ ಶಿಬಿರಗಳಾಗಿದ್ದವು ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು.