ತುರುವೇಕೆರೆ : ಸಾರ್ವತ್ರಿಕ ಮೌಲ್ಯಗಳನ್ನು ಆಚರಿಸುವುದೇ ಧರ್ಮವಾಗಿದೆ. ಧರ್ಮ ಸಾರ್ವತ್ರೀಕರಣವಾದ ಮೌಲ್ಯವಾಗಿದ್ದು, ಅದು ವ್ಯಕ್ತಿಗತವಾದ ನಿಷ್ಠೆಯಲ್ಲ ಎಂದು ಬರಹಗಾರ ತುರುವೇಕೆರೆ ಪ್ರಸಾದ್ ತಿಳಿಸಿದರು.
ತಾಲ್ಲೂಕಿನ ಅತ್ತಿಕುಳ್ಳೆಪಾಳ್ಯ ಗ್ರಾಮದ ಶ್ರೀ ಶನೇಶ್ವರ ದೇವಾಲಯದಲ್ಲಿ 25ನೇ ವರ್ಷದ ಕಾರ್ತೀಕ ದೀಪೋತ್ಸವದ ಅಂಗವಾಗಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಕುಗ್ರಾಮವಾಗಿದ್ದ ಅತ್ತಿಕುಳ್ಳೆಪಾಳ್ಯ ಇಂದು ಸುಗ್ರಾಮವಾಗಿರುವುದು ಶ್ರೀ ಶನೇಶ್ವರ ಧಾರ್ಮಿಕ ಕ್ಷೇತ್ರವಾಗಿ ಪ್ರಜ್ವಲಿಸಲು ಶನೇಶ್ವರ ಸ್ವಾಮಿಯ ದಿವ್ಯ ಆರ್ಶೀವಾದ ಹಾಗೂ ಈ ಗ್ರಾಮದ ಜನರ ಸಜ್ಜನಿಕೆ, ಧಾರ್ಮಿಕ ಶ್ರದ್ಧೆ ಕಾರಣವಾಗಿದೆ. ಕಳೆದ ಎರಡು ದಶಕದ ಹಿಂದೆ ಗ್ರಾಮಕ್ಕೆ ಬಂದ ಅಮಾನಿಕೆರೆ ಮಂಜಣ್ಣ, ಎನ್.ಆರ್. ಜಯರಾಮ್ ಗ್ರಾಮದ ಜನರಲ್ಲಿದ್ದ ಅಂಧಕಾರದ ಕೊಳೆಯನ್ನು ತೆಗೆದುಹಾಕಿ ಗ್ರಾಮಸ್ಥರ ನೆರವಿನಿಂದ ದೇವಸ್ಥಾನ ನಿರ್ಮಾಣ ಮಾಡಿ ಜನರಲ್ಲಿ ಧರ್ಮದ ದೀಪವನ್ನು ಪ್ರತಿ ವರ್ಷ ಹಚ್ಚುವಂತೆ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ನನಗೆ ನೋವಾಗುತ್ತದೆ, ನನಗೆ ಎಲ್ಲರೂ ಒಳ್ಳೆಯದನ್ನೇ ಬಯಸಬೇಕು, ಒಳ್ಳೆಯದನ್ನೇ ಹೇಳಬೇಕೆಂದು ನಿರೀಕ್ಷಿಸುವ ವ್ಯಕ್ತಿ ಬೇರೊಬ್ಬರೂ ಅದನ್ನೇ ಅಪೇಕ್ಷಿಸುತ್ತಾರೆಂಬುದರ ಪ್ರಜ್ಞೆ ವಹಿಸುವುದೇ ಧರ್ಮ. ಪ್ರಜ್ಞಾಪೂರ್ವಕವಾಗಿ ನಡೆದುಕೊಳ್ಳುವುದೇ ಧರ್ಮವಾಗಿದೆ. ವ್ಯವಸ್ಥೆಯ ನಿಯಮಗಳು, ಕಾನೂನಿನೊಂದಿಗೆ ರಾಜಿಸಂಧಾನ ಮಾಡಿಕೊಂಡು ನಾವೆಲ್ಲರೂ ಧರ್ಮಭ್ರಷ್ಟರಾಗುತ್ತಿದ್ದೇವೆ. ಸಾರ್ವಜನಿಕವಾಗಿ ರೂಪುಗೊಂಡ ಮೌಲ್ಯಗಳಿಗೆ, ನಿಯಮಗಳಿಗೆ, ನೈತಿಕತೆಯನ್ನು ಮೀರಿ ರಾಜಿ ಮಾಡಿಕೊಳ್ಳುವುದರಿಂದ ಧರ್ಮಭ್ರಷ್ಟರಾಗುತ್ತೇವೆ ಎಂದ ಅವರು, ಧರ್ಮಭ್ರಷ್ಟತೆಗೆ ಹೋಗದಂತೆ ಎಚ್ಚರಿಸುವ ಸಂಸ್ಕಾರದ ಹಾದಿಯಲ್ಲಿ ನಡೆಯಲು ಮಾರ್ಗದರ್ಶನ ಮಾಡುವ ಕಾರ್ಯವನ್ನು ಧಾರ್ಮಿಕ ಕ್ಷೇತ್ರಗಳು, ಶ್ರದ್ಧಾಕೇಂದ್ರಗಳು, ಮಠಮಾನ್ಯಗಳು, ಸಂತರು ಮಾಡುತ್ತಿದ್ದಾರೆ. ಸಂಸ್ಕಾರಯುತ, ಮೌಲ್ಯಯುತ ಬದುಕು ನಮ್ಮದಾಗಬೇಕೆಂಬ ಆಶಯದಿಂದಲೇ ಕಳೆದ 25 ವರ್ಷಗಳಿಂದ ಅತ್ತಿಕುಳ್ಳೆಪಾಳ್ಯದ ಶ್ರೀ ಶನಿದೇವರ ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವದೊಂದಿಗೆ ಸಂತರನ್ನು ಕರೆಸಿ ನಮಗೆಲ್ಲರಿಗೂ ಧರ್ಮದ ಅರಿವನ್ನು ಮೂಡಿಸಲಾಗುತ್ತಿದೆ ಎಂದರು.
ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್ ಮಾತನಾಡಿ, ಸಂಸ್ಕಾರವಿಲ್ಲದಿದ್ದರೆ ಸಮಾಜ ನಮ್ಮನ್ನು ಕೀಳಾಗಿ ಕಾಣುತ್ತದೆ, ಬದುಕು ವ್ಯರ್ಥವಾಗುತ್ತದೆ. ಪ್ರತಿಯೊಬ್ಬರೂ ಸಂಸ್ಕಾರದಿಂದ ನಡೆಯುವುದರ ಜೊತೆಗೆ ಮುಂದಿನ ಪೀಳಿಗೆಗೂ ಸಂಸ್ಕಾರವನ್ನು ಕಲಿಸಬೇಕಿದೆ. ಈ ನಿಟ್ಟಿನಲ್ಲಿ ಅತ್ತಿಕುಳ್ಳೆಪಾಳ್ಯದ ಶ್ರೀ ಶನೇಶ್ವರ ಸ್ವಾಮಿಯ ಕೃಪಾರ್ಶೀವಾದೊಂದಿಗೆ ಅಜ್ಞಾನದ ಕತ್ತಲನ್ನು ಹೋಗಲಾಡಿಸಿ ಜ್ಞಾನದ ದೀಪವನ್ನು ಹಚ್ಚುವ ಮೂಲಕ ಸರ್ವರೂ ಸಂಸ್ಕಾರಯುತ ಬದುಕಿನೆಡೆಗೆ ಹೊಸ ಹೆಜ್ಜೆಯನ್ನು ಇಡುವ ಸಂಕಲ್ಪ ಮಾಡೋಣ ಎಂದರು.
ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಸನಾತನ ಹಿಂದೂಧರ್ಮದ ಬಗ್ಗೆ ಸೀತಾಲಕ್ಷ್ಮೀ ಕೃಷ್ಣಮೂರ್ತಿ ಉಪನ್ಯಾಸ ನೀಡಿದರು.
ಅತ್ತಿಕುಳ್ಳೆಪಾಳ್ಯದ ಊರುಬಾಗಿಲಿನಿಂದ ಧಾರ್ಮಿಕ ನಾಯಕರು, ಸ್ವಾಮೀಜಿಗಳವರನ್ನು ಶ್ರೀ ಶನಿದೇವರ ಬಸವ ಹಾಗೂ ನಗಾರಿ ವಾದ್ಯ, ಮಂಗಳವಾದ್ಯ, ಜಾನಪದ ಕಲಾತಂಡಗಳೊಂದಿಗೆ, ಕಳಶ ಹೊತ್ತ ಹೆಣ್ಣುಮಕ್ಕಳ ಪೂರ್ಣಕುಂಭ ಸ್ವಾಗತದೊಂದಿಗೆ ಪಾದಯಾತ್ರೆ ಮೂಲಕ ಧಾರ್ಮಿಕ ಸಭೆಯ ವೇದಿಕೆಗೆ ಕರೆತರಲಾಯಿತು. ರಾಜ್ಯ ಜೆಡಿಎಸ್ ಯುವ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್, ಟ್ರಸ್ಟ್ ನ ಗೌರವಾಧ್ಯಕ್ಷ ಎನ್.ಆರ್. ಜಯರಾಮ್, ಅಧ್ಯಕ್ಷ ಟಿ.ಎನ್.ಮಂಜುನಾಥ್ (ಅಮಾನಿಕೆರೆ), ಉಪಾಧ್ಯಕ್ಷ ಮೂಡಲಗಿರಯ್ಯ, ಕಾರ್ಯದರ್ಶಿ ಕುಮಾರ್, ಉದ್ಯಮಿ ಎಂ.ಡಿ.ಮೂರ್ತಿ, ಭಾರತೀಯ ಜೀವವಿಮಾ ನಿಗಮದ ವ್ಯವಸ್ಥಾಪಕ ಪ್ರಜಾಪತಿ, ಇನ್ನರ್ ವೀಲ್ ಕ್ಲಬ್ ಆಫ್ ಸಂಕಲ್ಪದ ಅಧ್ಯಕ್ಷೆ ಇಂದಿರಾಪ್ರಭಾಕರ್, ಲಯನ್ಸ್ ಅಧ್ಯಕ್ಷ ಪರಮೇಶ್ವರಯ್ಯ, ಪಪಂ ಮಾಜಿ ಅಧ್ಯಕ್ಷೆ ಶೀಲಾಶಿವಪ್ಪನಾಯಕ, ಮುಖಂಡರಾದ ವಿಜಯೇಂದ್ರಕುಮಾರ್, ಬುಗುಡನಹಳ್ಳಿ ಕೃಷ್ಣಮೂರ್ತಿ, ಸೇರಿದಂತೆ ಟ್ರಸ್ಟ್ ನ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ಗಿರೀಶ್ ಕೆ ಭಟ್




