ಬೆಂಗಳೂರು: ಲೋಕಸಭೆ ಚುನಾವಣೆ ನೀತಿ ಸಂಹಿತೆ ಘೋಷಣೆಯಾದ ಬಳಿಕ ರಾಜ್ಯದಲ್ಲಿ ಇದುವರೆಗೆ ನಗದು, ಚಿನ್ನಾಭರಣ, ಮದ್ಯ ಸೇರಿ 345 ಕೋಟಿ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಇವುಗಳಲ್ಲಿ ಶೇಕಡ 49ರಷ್ಟು ವಸ್ತುಗಳನ್ನು ಸೂಕ್ತ ದಾಖಲೆ ಪತ್ರ ಆಧರಿಸಿ ವಾರಸುದಾರರಿಗೆ ಮರಳಿಸಲಾಗಿದೆ.
ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್ ಕುಮಾರ್ ಮೀನಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ಭಾನುವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, 2023ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭಕ್ಕೆ ಹೋಲಿಸಿದರೆ ಈಗ ಹೆಚ್ಚಿನ ಹಣ, ಮದ್ಯ ಮತ್ತು ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗೆ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೇಸಿಗೆ ಹಿನ್ನೆಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಮತಗಟ್ಟೆಗಳ ಬಳಿ ನೆರಳಿನ ವ್ಯವಸ್ಥೆ ಮಾಡಲಾಗಿದೆ. ಮತದಾರರ ಆರೋಗ್ಯದ ದೃಷ್ಟಿಯಿಂದ ಆರೋಗ್ಯ ಕಾರ್ಯಕರ್ತರನ್ನು ನಿಯೋಜಿಸಿ ವೈದ್ಯಕೀಯ ಸಲಕರಣೆಗಳ ಕಿಟ್ ಮತ್ತು ಆಂಬುಲೆನ್ಸ್ ಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.