Ad imageAd image

ಬಲಭೀಮಸೇನ ದೇವಸ್ಥಾನದಲ್ಲಿ ಕರ್ನಾಟಕದ ಸಂಗೀತ ಪಿತಾಮಹ ದಾಸ ಶ್ರೇಷ್ಠ ಶ್ರೀ ಪುರಂದರದಾಸರ 462 ನೇ ಆರಾಧನಾ ಮಹೋತ್ಸವ.

Bharath Vaibhav
ಬಲಭೀಮಸೇನ ದೇವಸ್ಥಾನದಲ್ಲಿ ಕರ್ನಾಟಕದ ಸಂಗೀತ ಪಿತಾಮಹ ದಾಸ ಶ್ರೇಷ್ಠ ಶ್ರೀ ಪುರಂದರದಾಸರ 462 ನೇ ಆರಾಧನಾ ಮಹೋತ್ಸವ.
WhatsApp Group Join Now
Telegram Group Join Now

ಸೇಡಂ : ದಿ.18-1-2026 ರಂದು ಶ್ರೀ ಕ್ಷೇತ್ರ ಮೊತಕಪಲ್ಲಿ ಶ್ರೀ ಬಲಭೀಮಸೇನ ದೇವಸ್ಥಾನದಲ್ಲಿ ಶ್ರೀ ಪುರಂದರದಾಸರ ೪೬೨ನೇ ಆರಾಧನಾ ಮಹೋತ್ಸವನ್ನು ಮಾಡಲಾಯಿತು ಎಂದು ದೇವಸ್ಥಾನದ ಅರ್ಚರಕರಾದ ವೆಂಕಟೇಶಾಚಾರ್ಯ ಅವರು ಪತ್ರಿಕಾ ಪ್ರಕಟಣಗೆ ಮಾಹಿತಿ ನೀಡಿದರು.

ಈ ಕುರಿತು ಪತ್ರಿಕಾ ಪ್ರಕಟಣೆಗೆ ಹೇಳಿಕೆ ನೀಡಿದ ಅವರು” ಶ್ರೀ ಪುರಂದರದಾಸರ ಸಂಕ್ಷಿಪ್ತ ಮಾಹಿತಿ ”
ಶ್ರೀ ವ್ಯಾಸರಾಜ ಗುರುಸಾರ್ವಭೌಮರ ಪ್ರೀತಿಯ ಶಿಷ್ಯರಾದ ಶ್ರೀ ಪುರಂದರದಾಸರು ದಾಸ ಶ್ರೇಷ್ಠರೆಂದು ಪ್ರಸಿದ್ಧರಾಗಿದ್ದಾರೆ.
ಶ್ರೀ ನಾರದಾಂಶ ಸಂಭೂತರೆಂದೂ; ಪುರಾಣ ಪ್ರಥಿತರಾದ ಶ್ರೀ ಪುರಂದರದಾಸರು ಮೊದಲು ಜಿಪುಣ ನಾಯಕರಾಗಿ – ಮಡದಿಯ ( ಸರಸ್ವತೀಬಾಯಿ ) ಪುಣ್ಯದಿಂದ ಮುಂದೆ ನಿಪುಣ ದಾಸರಾದರು.ಶ್ರೀ ವೇದವ್ಯಾಸದೇವರು ” ಗರುಡಪುರಾಣ ” ದ ” ದೇವಖಾಂಡ ” ದಲ್ಲಿ.

ನಾರದೋ ವಿಷ್ಣು ಸೇವಾರ್ಥಂ ವಾಯ್ವಾವೇಶಯುತೋsಜನಿ । ಪುರಂದರ ಇತಿ ಖ್ಯಾತಸ್ತತ್ವಮಾರ್ಗ ಪ್ರದರ್ಶಯನ್ ।।

ಶೂದ್ರ ಯೋನೌ ಚ ಸಂಜಾತೋ ನಾರದಃ ಪೂರ್ವ ಜನ್ಮನೀ । ತದ್ದೋಷ ಪರಿಹಾರಾರ್ಥಂ ರುದ್ರಚೋದಿತ ಮಾನಸಃ ।।

ನಾನಾ ವಿಧಂ ಪದ್ಯಮಾಲಾಂ ವಿಷ್ಣೋರರ್ಥ ಪ್ರಕಾಶಿಕಾಂ । ಚಕಾರ ವಿಠ್ಠಲ ಪ್ರೀತೈ:ದುಃಖ ಪ್ರಾರಬ್ಧ ಮೋಕ್ಷಣೀ೦।।

ಶ್ರೀ ನಾರದರು ಭೂಮಿಯೊಳಗೆ ಅನೇಕ ಬಾರಿ ಹುಟ್ಟುವರು ಎಂದು ” ಶ್ರೀ ಬೃಹನ್ನಾರದೀಯ ಪುರಾಣ ” ದಲ್ಲಿ ಶ್ರೀ ಭಗವನ್ ವೇದವ್ಯಾಸದೇವರು. ನಾರದೋ ನಾರದೋ ಭೂಯೋ ಭೂಯೋ ಭೂಯೋsಪಿ ನಾರದಃ । ನಾರಾಯಣಪರೋ ನಾರೋ ನಾರೋ ನರಹಿತೋsಮರಃ!!

ಶ್ರೀ ವ್ಯಾಸರಾಜ ಗುರುಸಾರ್ವಭೌಮರ ದಿವ್ಯ ವರ್ಚಸ್ಸಿನಿಂದ ಪ್ರಭಾವಿತರಾಗಿ ಪುರಂದರಗಡದ ಶ್ರೀ ಶ್ರೀನಿವಾಸ ನಾಯಕರು ” ಪುರಂದರದಾಸ ” ರಾದರು.

ನವಕೋಟಿ ನಾರಾಯಣರಾದ ಶ್ರೀ ಶೀನಪ್ಪ ನಾಯಕರು ವೈರಾಗ್ಯ ಮೂಡಿದ ಚಣದಲ್ಲಿಯೇ ತಮ್ಮ ಅಪಾರ ಐಶ್ವರ್ಯವನ್ನೆಲ್ಲಾ ದಾನ ಮಾಡಿ ವಿರಕ್ತರಾಗಿ ಶ್ರೀ ವ್ಯಾಸರಾಜರ ಬಳಿ ಬಂದರು. ಅವರಲ್ಲಿ ದ್ವೈತ ವೇದಾಂತವನ್ನೆಲ್ಲಾ ಅಧ್ಯಯನ ಮಾಡಿ ಅವರಿಂದಲೇ ಅಂಕಿತವನ್ನು ಪಡೆದರು. ಶ್ರೀ ಪುರಂದರದಾಸರು.

ಅಚ್ಛ ಕನ್ನಡದಲ್ಲಿ ಪದ – ಪದ್ಯ – ಸುಳಾದಿ – ಉಗಾಭೋಗಳನ್ನು ರಚಿಸಿ ಮಧ್ವ ಮತವನ್ನು ಪ್ರಸಾರ ಮಾಡಬೇಕೆಂದು ಶ್ರೀ ವ್ಯಾಸರಾಜರು ಶ್ರೀ ಪುರಂದರದಾಸರಿಗೆ ಅಪ್ಪಣೆ ಮಾಡಿದರು.
ಶ್ರೀ ಪುರಂದರ ವಿಠ್ಠಲ ಎಂಬ ಅಂಕಿತದಿಂದ ” 475000 ” ರಚಿಸಿದ್ದಾರೆಂದು ಅವರ ಕೃತಿಗಳಿಂದಲೇ ತಿಳಿದು ಬರುತ್ತದೆ.
1) 1,25,000 – ಪುಣ್ಯ ಕ್ಷೇತ್ರಗಳ ಮಹಿಮಾ – ಗುರು ಮಧ್ವರಾಯರ ಮಹಿಮೆ ಮತ್ತು ಯತಿ ಸಂತತಿ ಪದಗಳು
2) 25,000 – ತಾರತಮ್ಯ ಗುರು ಧ್ಯಾನ ಮೂರುತಿ ಧ್ಯಾನ ಚರಿತ್ರೆ
3) 64,000 – ಸುಳಾದಿಗಳು
4) 36,000 – ವೃತ್ತ ನಾಮಗಳು
5) 60,000 – ಶ್ವೇತದ್ವೀಪ – ಅನಂತಾಸನ – ವೈಕುಂಠ – ಸತ್ಯಲೋಕ – ಕೈಲಾಸ – ದಿಕ್ಪಾಲಕರ ಕುರಿತು
6) 40,000 – ಕಲ್ಯಾಣ ಚರಿತೆ
7) 75,000 – ಆಹ್ನೀಕ – ಏಕಾದಶೀ – ಜನ್ಮಾಷ್ಟಮೀ ನಿರ್ಣಯ – ಗಂಡಿಕಾ ಶಿಲಾ ಮಹಿಮಾ – ಉಗಾಭೋಗಳು
8) 50,000 – ಲೋಕ ನೀತಿ ಇತ್ಯಾದಿ.
4,75,000 – ಒಟ್ಟು ನಾಲ್ಕು ಲಕ್ಷ ಯಪ್ಪತ್ತೈದು ಸಾವಿರ.

ಶ್ರೀ ಪುರಂದರದಾಸರ ಪದ್ಯಗಳನ್ನು ಓದಿದರೆ ಅವರ ಲೋಕಾನುಭವವೂ – ವೇದ ಶಾಸ್ತ್ರಗಳ ಪರಿಜ್ಞಾನವೂ ಎಷ್ಟು ವಿಶಾಲವಾಗಿದ್ದವೆಂಬುದು ಸ್ಪಷ್ಟವಾಗಿ ತಿಳಿದು ಬರುತ್ತದೆ.

ಶ್ರೀ ಪುರಂದರದಾಸರ ಕೃತಿಗಳಲ್ಲಿ ಆಧ್ಯಾತ್ಮ ನಿಷ್ಠತೆ – ಕವಿತಾ ಶಕ್ತಿ – ಹಾಸ್ಯ – ಸಮಾಜ ವಿಡಂಬಣೆ – ಆಳವಾದ ಲೋಕಾನುಭವ – ಮಾನವೀಯ ಸ್ವಭಾವ ವಿಶ್ಲೇಷಣ ಮುಂತಾದ ಗುಣಗಳು ಎದ್ದು ಕಾಣುತ್ತವೆ.

ಕೆಲವು ಕಡೆಗಳಲ್ಲಿ ಶ್ರೀ ದಾಸಾರ್ಯರ ವಾಣಿಯು ಬಾಣವಾಗಿ ನುಡಿಗಳೆಲ್ಲಾ ಕಿಡಿಗಳಾಗಿ – ಮಾತು ಮೊನಚಾಗಿ – ಚಾಟೋಕ್ತಿಗಳ ನೆವದಿಂದ ಚಾವಟಿಯ ಏಟುಗಳನ್ನು ಹಾಕಿದಂತೆ ತೋರಿದರೂ ಅದರ ಹಿಂದೆ ಲೋಕ ಕಲ್ಯಾಣಾಕಾಂಕ್ಷೆಯ ಕಳಕಳಿಯಿದೆ.
ಹೀಗೆ ವಿವಿಧ ಹಂತಗಳಲ್ಲಿ ನಾಡು – ನುಡಿ – ಸಿದ್ಧಾಂತ – ಸಮಾಜಗಳ ಸೇವೆಗೈದ ಶ್ರೀ ಪುರಂದರದಾಸರು ಭಾರತದೇಶಕ್ಕೆ ಕೊಟ್ಟ ದೊಡ್ಡ ಕೊಡುಗೆ ಯೆಂದರೆ ” ಕರ್ನಾಟಕ ಸಂಗೀತ “.

ಶ್ರೀ ಪುರಂದರದಾಸರು ಕರ್ನಾಟಕ ಸಂಗೀತದ ಮೂಲ ದೃಷ್ಟಾರರೆಂದೂ – ಮಹಾ ಮಹರ್ಷಿಗಳೆಂದೂ ಇಂದು ಎಲ್ಲಾ ವಿಚಾರವಂತರೂ ಒಪ್ಪಿಕೊಂಡಿದ್ದಾರೆ.

ಸರಸ ಸಾಹಿತ್ಯಕ್ಕೆ ಸುಂದರ ಸಂಗೀತದ ಮಾಧುರ್ಯವನ್ನು ಬೆರಸಿ – ಲಕ್ಷಣ ಶಾಸ್ತ್ರದ ಅಲಂಕಾರಗಳನ್ನು ತೊಡಿಸಿ – ಆಧ್ಯಾತ್ಮದ ಒಪ್ಪವಿಟ್ಟು – ಜಗದೋದ್ಧಾರಕ್ಕಾಗಿ ಮೂಡಿ ಬಂದ ಶ್ರೀ ಪುರಂದರದಾಸರ ಹಾಡುಗಬ್ಬುಗಳು ಪಾಡುವವರಿಗೂ – ಕೇಳುವವರಿಗೂ ಹೃದಯಕ್ಕೆ ಹಬ್ಬವಾಗಿ – ಕನ್ನಡ ವೇದಗಳಾಗಿ, ಬೋಧ – ಮೋದ – ವಿನೋದಗಳನ್ನು ಒದಗಿಸಿ ಆತ್ಮಶೋಧಕ್ಕೆ ದಾರಿ ತೋರಿಸುವ ಆತ್ಮಾನಂದದ ಆಸ್ವಾದಕ್ಕೆ ಮುತ್ತಿನ ಮಾಲೆಗಳಂತೆ ಇರುತ್ತವೆ.

ಶ್ರೀ ಪುರಂದರದಾಸರು ಕ್ರಿ ಶ 1484 – 1564 ರ ಮಧ್ಯಭಾಗದಲ್ಲಿ ಬಾಳಿ ಬದುಕಿದರು. ಬದುಕಿನ ಎಲ್ಲ ಮಗ್ಗಲುಗಳನ್ನು ನೋಡಿದವರು. ಪ್ರಪಂಚವನ್ನು ವಿಸ್ತಾರವಾಗಿ ಕಂಡವರು.

ಆಗರ್ಭ ಶ್ರೀಮಂತರಾಗಿದ್ದರೂ ಹೆಂಡತಿಯ ಪ್ರೇರಣೆಯಲ್ಲಿ ಜೀವನದ ನೈಜ ಸ್ವರೂಪವನ್ನು ಅರ್ಥ ಮಾಡಿಕೊಂಡು ಸಂಪತ್ತೆಲ್ಲಾ ದಾನ ಮಾಡಿ – ಹರಿದಾಸರಾಗಿ ಜೀವನದ ಗುಟ್ಟನ್ನು ಬಿಚ್ಚಿ, ಸದ್ಗತಿ ಪಡೆಯಲು ಸಾಧನಾ ಕ್ರಮವನ್ನು ಬೀದಿ ಬೀದಿ – ಕೇರಿ ಕೇರಿ – ಮನೆ ಗುಡಿಸಲುಗಳೆನ್ನದೆ ಎಲ್ಲೆಡೆಯೂ ಅಲೆದಾಡಿ, ಹಾಡಿ ಹಾಡಿ ತಿಳಿ ಹೇಳಿ ಕುಣಿದಾಡಿದರು. ಶ್ರೀ ಪುರಂದರದಾಸರೊಂದು ಸಂಚಾರಿ ವಿಶ್ವವಿದ್ಯಾಲಯವಾಗಿ ಸಾಮನ್ಯರ ಬದುಕಿನಲ್ಲಿ ವಿಶ್ವಾಸವನ್ನು ಮೂಡಿಸಿದ ಮಹಾನುಭಾವರು!!
ಈ ರೀತಿ ಶ್ರೀ ಪುರಂದರದಾಸರು ಇಹಲೋಕದಲ್ಲಿ ಮಾಡಬೇಕೆಂದಿದ್ದ ಸೇವೆಯನ್ನು ಪೂರೈಸಿ – ಶ್ರೀ ಹರಿಯನ್ನು ನಿತ್ಯದಲ್ಲಿಯೂ – ನಿಜ ರೂಪದಲ್ಲಿಯೂ ಸೇವಿಸಲು ರಕ್ತಾಕ್ಷಿ ನಾಮ ಸಂವತ್ಸರ ಪುಷ್ಯ ಬಹುಳ ಅಮಾವಾಸ್ಯೆ ರವಿವಾರದಂದು ವೈಕುಂಠಕ್ಕೆ ತೆರಳಿದರು.

ಮನ್ಮನೋಭೀಷ್ಟವರದಂ ಸರ್ವಾಭೀಷ್ಟಫಲಪ್ರದಮ್ ।
ಪುರಂದರಗುರು೦ ವಂದೇ ದಾಸಶ್ರೇಷ್ಠದಯಾನಿಧಿಮ್ ।।
ಈ ಎಲ್ಲಾ ಮಾಹಿತಿಯನ್ನು ದೇವಸ್ಥಾನದ ಅರ್ಚಕರಾದ ವೆಂಕಟೇಶಾಚಾರ್ಯ ಪೂಜಾರ್ ಮೋತಕಪಲ್ಲಿ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.

ವರದಿ : ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!