ಶಿರಸಿ (ಉತ್ತರ ಕನ್ನಡ): ಕಾಶ್ಮೀರದ ಪಹಲ್ಗಾಮ್ ಘಟನೆ ಇಡೀ ಪ್ರಪಂಚವನ್ನೇ ತಲ್ಲಣಗೊಳಿಸಿದೆ. ಘಟನೆಯಲ್ಲಿ 26 ಜನ ಜೀವವನ್ನು ಕಳೆದುಕೊಂಡರೆ, ಹಲವರು ಅದೃಷ್ಟವಶಾತ್ ಪಾರಾಗಿ ಬಂದಿದ್ದಾರೆ. ಅವರಲ್ಲಿ ಶಿರಸಿ ಮೂಲದ ಕುಟುಂಬವೂ ಒಂದು. ಅಲ್ಲಿಂದ ಪಾರಾಗಿ ಬಂದಿರೋ ಸಂಗತಿ, ಅಲ್ಲಿನ ನಡೆದ ಕರಾಳ ಘಟನೆಯನ್ನು ವಿವರಿಸಿದ್ದನ್ನು ಅವರ ಬಾಯಲ್ಲೇ ಕೇಳಿ.
ಹೌದು, ದೇಶದ ಕಿರೀಟಪ್ರಾಯವಾಗಿರೋ ಭಾರತದ ಮಿನಿ ಸ್ವಿಟ್ಜರ್ಲೆಂಡ್ ಎಂಬ ಖ್ಯಾತಿ ಪಡೆದಿರುವ ಕಾಶ್ಮೀರಕ್ಕೆ ಪ್ರವಾಸ ಹೋಗುವುದೆಂದರೆ ಕನಸಿಗಿಂತಲೂ ಆನಂದ. ಆದರೆ ಏಪ್ರಿಲ್ 22 ರಂದು ನಡೆದ ಘಟನೆಯಿಂದ ಸ್ವರ್ಗವೆಂದುಕೊಂಡಿದ್ದ ಅದೇ ಕಾಶ್ಮೀರ ರಕ್ತಪಾತಕ್ಕೆ ಕಾರಣವಾಯಿತು.
![]()
ಘಟನೆಯಲ್ಲಿ ಉಗ್ರರು ಹೊಡೆದ ಗುಂಡೊಂದು ಶಿರಸಿಯ ಗುಬ್ಬಿಗದ್ದೆಯ ಶುಭಾ ಹೆಗಡೆ ಅವರ ಕಿವಿ ಪಕ್ಕದಲ್ಲಿ ಹಾದು ಹೋಗಿದ್ದು, ಕೂದಲೆಳೆಯ ಅಂತರದಿಂದ ಅವರು ಪಾರಾಗಿ ಬಂದಿದ್ದಾರೆ. ಅವರ ಪತಿ ಪ್ರದೀಪ ಹೆಗಡೆ, ಪುತ್ರ ಸಿದ್ದಾಂತ ಹೆಗಡೆ ಸಹ ಭಯೋತ್ಪಾದಕರ ದಾಳಿಯಿಂದ ತಪ್ಪಿಸಿಕೊಂಡು ಮರುಜನ್ಮ ಪಡೆದಿದ್ದಾರೆ.
ಎಳೆಎಳೆಯಾಗಿ ಭಯಾನಕತೆಯನ್ನು ವಿವರಿಸಿದ ಕುಟುಂಬ: ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗಿಯಾಗಿರುವ ಪ್ರದೀಪ ಅವರು ಕುಟುಂಬ ಸಮೇತ ಏಪ್ರಿಲ್ 21ರಂದು ಶ್ರೀನಗರದ ಭಾಗಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿ ನಡೆದ ಘಟನೆ ಈ ಕುಟುಂಬದ ಜೀವನದಲ್ಲಿ ಮರೆಯಲಾಗದ ಘಟನೆಯಾಗಿ ಉಳಿದಿದೆ.




