ಬೆಂಗಳೂರು : ಇತ್ತೀಚಿಗೆ ಚಿಕ್ಕಮಗಳೂರಲ್ಲಿ ಕಂಡಕ್ಟರ್ ಪುರುಷ ಪ್ರಯಾಣಿಕನಿಗೆ ಪ್ರಯೋಜನ ಟಿಕೆಟ್ ನೀಡಿದ್ದು, ಭಾರಿ ಚರ್ಚೆಯಾಗಿತ್ತು.
ಇದೀಗ ಬೆಂಗಳೂರಲ್ಲಿ ಪುರುಷರಿಗೂ ಶಕ್ತಿ ಯೋಜನೆ ಟಿಕೆಟ್ ನೀಡಿ ಹಣ ಪಡೆದು ಬಿಎಂಟಿಸಿಗೆ ವಂಚಿಸುತ್ತಿದ್ದ ಐವರು ನೌಕರರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕನ್ನಡ ಓದಲು ಬಾರದ ಪ್ರಯಾಣಿಕರನ್ನೇ ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದುಬಂದಿದೆ. ಅಲ್ಲದೇ ಅಕೌಂಟ್‍ನಲ್ಲಿಯೂ ಸಾವಿರಾರು ರೂ. ಹಣ ಇರುವುದು ಪತ್ತೆಯಾಗಿದೆ. ಬಿಎಂಟಿಸಿಯ ಸೆಕ್ಯೂರಿಟಿ ಅಧಿಕಾರಿಗಳ ತಪಾಸಣೆ ವೇಳೆ ಕಂಡಕ್ಟರ್‌ಗಳ ವಂಚನೆ ಬಯಲಾಗಿದೆ.
ಸೂರ್ಯನಾರಾಯಣ, ಬೊಮ್ಮಲಿಂಗೇಶ್, ಬ್ರಿಜೇಶ್ ಬಾಬು, ಮೋಹನ್, ಹಾಗು ಎನ್.ಪ್ರಕಾಶ್ ಈ ಐವರನ್ನು ಸಸ್ಪೆಂಡ್ ಮಾಡಲಾಗಿದೆ. ವೈಯಕ್ತಿಕ ಯುಪಿಐ ಕ್ಯೂಆರ್ ಕೋಡ್‍ಗಳನ್ನು ಬಳಸಿ ನಿಗಮಕ್ಕೆ ಬರಬೇಕಿದ್ದ ಹಣವನ್ನು ಲಪಟಾಯಿಸಿದ ಆರೋಪ ಸಾಬೀತಾದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಲಕ್ಷಾಂತರ ರೂಪಾಯಿ ವಂಚನೆ ಬಯಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.




