ಬಾಗಲಕೋಟೆ : ಕಾಲ ಎಷ್ಟೇ ಬದಲಾದರೂ ದೇವರ ಮೇಲಿನ ಭಕ್ತಿ, ನಂಬಿಕೆ ಮಾತ್ರ ಬದಲಾಗುವುದಿಲ್ಲ. ದೇವರ ಭಕ್ತಿ ಮುಂದೆ ನಗ ನಾಣ್ಯ ಕೂಡ ನಗಣ್ಯ. ಇದಕ್ಕೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಚಿಕ್ಕಲಕಿ ಗ್ರಾಮದಲ್ಲಿ ನಡೆದ ಅದೊಂದು ಘಟನೆ ಸಾಕ್ಷಿ ಆಗಿದೆ.
ದೇವರಿಗೆ ಅರ್ಪಿಸಿದ್ದ ತೆಂಗಿನಕಾಯಿಯನ್ನು ಓರ್ವ ಭಕ್ತ ಹರಾಜಿನಲ್ಲಿ ಬರೋಬ್ಬರಿ 5,71,001 ರೂ ಬೆಲೆಗೆ ತಮ್ಮದಾಗಿಸಿಕೊಂಡಿದ್ದಾರೆ.
ಚಿಕ್ಕಲಕಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಾಳಿಂಗರಾಯನ ಜಾತ್ರೆ ಅದ್ದೂರಿಯಾಗಿ ನಡೆಯಿತು. ಶ್ರಾವಣ ಮಾಸದ ಒಂದು ತಿಂಗಳ ವಿವಿಧ ಆಚರಣೆ ನಂತರ ಕೊನೆಯಲ್ಲಿ ಜಾತ್ರೆ ನಡೆಯುತ್ತದೆ.
ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರೆ ಅದ್ದೂರಿಯಾಗಿ ನಡೆಯಿತು. ಜಾತ್ರೆ ಮುಗಿಯುವ ಹಂತದಲ್ಲಿ ದೇವರ ಮೇಲಿನ ಹಾಗೂ ಗದ್ದುಗೆ ಮೇಲಿನ ವಸ್ತುಗಳನ್ನು ಹರಾಜು ಮಾಡುವ ಸಂಪ್ರದಾಯವಿದೆ.
ಅದರಂತೆಯೇ ಮಾಳಿಂಗರಾಯರ ಗದ್ದುಗೆ ಮೇಲೆ ಪೂಜಿಸುವ ತೆಂಗಿನಕಾಯಿಗೆ ಬಾರಿ ಮಹತ್ವವಿದೆ. ಅದು ಅಂತಿಂತಹ ತೆಂಗಿನಕಾಯಿ ಅಲ್ಲ. ದೇವರಿಗೆ ಅರ್ಪಿಸಿದ ತೆಂಗಿನಕಾಯಿ. ಅದಕ್ಕೆ ಬೆಲೆ ಕಟ್ಟುವುದಕ್ಕೆ ಸಾಧ್ಯವಿಲ್ಲ ಎಂಬುದು ಭಕ್ತರ ನಂಬಿಕೆ.
ಆ ಪ್ರಕಾರ ಹರಾಜು ಪ್ರಕ್ರಿಯೆ ಆರಂಭವಾಗಿತ್ತು. ಮಾಳಿಂಗರಾಯನ ಗದ್ದುಗೆ ತೆಂಗಿನಕಾಯಿ ಹರಾಜು ನಡೆದಿತ್ತು. ತೆಂಗಿನಕಾಯಿ ಹರಾಜು 100, 200, ಸಾವಿರ ರೂ, ಅಂತೆ ಸಾಗಿ ಕೊನೆಗೆ ತಲುಪಿದ್ದು ಬರೋಬ್ಬರಿ 5,71,001 ರೂ. ಆ ಮೂಲಕ ವಿಜಯಪುರ ಜಿಲ್ಲೆಯ ತಿಕೋಟಾ ಗ್ರಾಮದ ಮಾಹಾವೀರ ಹರಕೆ ಎಂಬ ಭಕ್ತರ ಪಾಲಾಗಿದೆ.




