ಬೆಳಗಾವಿ: ಸೈಬರ್ ವಂಚಕರ ಕಾಟ ತಾಳಲಾರದೇ ವೃದ್ಧ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಡಯಾಗೊ ಸಂತಾನ್ ನಜರೆತ್ (82) ಮತ್ತು ಫ್ಲೇವಿಯಾನಾ ನಜರೆತ್ (79) ಎಂದು ಗುರುತಿಸಲಾಗಿದೆ. ಫ್ಲೇವಿಯಾನಾ ನಜರೆತ್ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರೆ, ಡಯಾಗೊ ಚಾಕುವಿನಿಂದ ಕುತ್ತಿಗೆ ಕೊಯ್ದು ಸೂಸೈಡ್ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ದಂಪತಿ ಇಂಗ್ಲಿಷ್‌ನಲ್ಲಿ ಡೆತ್‌ನೋಟ್ ಬರೆದಿದ್ದಾರೆ.
ಈ ಕುರಿತು ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿ, ಸೈಬರ್ ವಂಚಕರು ಬೆದರಿಕೆ ಕರೆ ಮಾಡಿ ಡಯಾಗೊ ಅವರಿಂದ 50 ಲಕ್ಷ ರೂ. ಹೆಚ್ಚು ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.
ಇಷ್ಟುಮಾತ್ರವಲ್ಲದೇ ಮತ್ತೆ ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ಇದರಿಂದ ತಮ್ಮ ಜೀವನವನ್ನು ಕೊನೆಗೊಳಿಸಲು ದಂಪತಿ ನಿರ್ಧರಿಸಿದ್ದರು. ತಮ್ಮ ಡೆತ್ ನೋಟ್‌ನಲ್ಲಿ, ದಂಪತಿ ಕೆಲವು ವ್ಯಕ್ತಿಗಳಿಂದ ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು.