ನಾಂದೇಡ್: ಇಲ್ಲಿನ ರೈತ ದಂಪತಿ ಕೇವಲ ಒಂದೂವರೆ ಎಕರೆ ಜಮೀನಿನಲ್ಲಿ 52 ಟನ್ ಕಲ್ಲಂಗಡಿ ಬೆಳೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ನೈಗಾಂವ್ ತಾಲೂಕಿನ ಶೆಲ್ಗಾಂವ್ ಛತ್ರಿಯ ಅರ್ಚನಾ ಸಲೆಗಾವೆ ಮತ್ತು ಸಾಗರ್ ಸಲೆಗಾವೆ 52 ಟನ್ ಕಲ್ಲಂಗಡಿ ಬೆಳೆದ ದಂಪತಿ.
ನಾಂದೇಡ್ನ ಕಲ್ಲಂಗಡಿ ಕೇರಳಕ್ಕೆ ರಫ್ತು: ಒಂದೂವರೆ ಎಕರೆಯಲ್ಲಿ ಬೆಳೆದ 52 ಟನ್ ಕಲ್ಲಂಗಡಿ ಮಾರಾಟದಿಂದ ಈ ರೈತ ದಂಪತಿ ಆರು ಲಕ್ಷ ರೂಪಾಯಿ ಆದಾಯ ಗಳಿಸಿದ್ದಾರೆ. ದಂಪತಿ ಬೆಳೆದ ಕಲ್ಲಂಗಡಿಯನ್ನು ಸ್ಥಳೀಯ ವ್ಯಾಪಾರಿ ಮೆಹಬೂಬ್ ಶೇಖ್ ಖರೀದಿ ಮಾಡಿದ್ದಾರೆ. ನಂತರ ಅವರು ಕೇರಳ ರಾಜ್ಯಕ್ಕೆ ರಫ್ತು ಮಾಡಿದ್ದಾರೆ. ಕೇರಳದಲ್ಲಿ ಮಹಾರಾಷ್ಟ್ರದ ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಬೇಡಿಕೆಯಿದ್ದು, ಉತ್ತಮ ಬೆಲೆ ಸಿಗುತ್ತದೆ.
ಬೇಸಿಗೆಯಲ್ಲಿ ಕಲ್ಲಂಗಡಿಗೆ ಭಾರಿ ಬೇಡಿಕೆ: ಬೇಸಿಗೆಯಲ್ಲಿ ಕಲ್ಲಂಗಡಿಗೆ ಭಾರಿ ಬೇಡಿಕೆ ಇರುತ್ತದೆ. ಹೀಗಾಗಿ ಸಾಗರ್ ದಿಲೀಪ್ ಸಲೆಗಾವೆ ದಂಪತಿ, ಒಂದೂವರೆ ಎಕರೆ ಜಮೀನಿನಲ್ಲಿ 52 ಟನ್ ಕಲ್ಲಂಗಡಿ ಬೆಳೆದು ದಾಖಲೆ ಬರೆದಿದ್ದಾರೆ. ದಂಪತಿ 2024 ಡಿಸೆಂಬರ್ 8 ರಂದು ಕಲ್ಲಂಗಡಿ ಸಸಿ ನೆಟ್ಟಿದ್ದರು. ಸಮಯಕ್ಕೆ ಸರಿಯಾಗಿ ಸಸಿಗಳಿಗೆ ಗೊಬ್ಬರ ಮತ್ತು ನೀರು ಒದಗಿಸಿ ಮಕ್ಕಳಂತೆ ನೋಡಿಕೊಂಡಿದ್ದರು. 90 ದಿನಗಳ ನಂತರ ಕಲ್ಲಂಗಡಿ ಫಸಲು ಬಂದಿದ್ದು, ಮಾರುಕಟ್ಟೆಯಲ್ಲಿ ಮಾರಾಟಕ್ಕೆ ಲಭ್ಯವಾಗಿದೆ. 52 ಟನ್ ಕಲ್ಲಂಗಡಿ ಮಾರಾಟದಿಂದ ಆರು ಲಕ್ಷ ರೂಪಾಯಿ ಆದಾಯ ಗಳಿಸಿದ ದಂಪತಿಯ ಖುಷಿಗೆ ಪಾರವೇ ಇಲ್ಲದಂತಾಗಿದೆ.




