1) ಮೂರು ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯ ಭರ್ತಿಗೆ ಇನ್ನೂ ಕೇವಲ ಮೂರೇ ಅಡಿ ಬಾಕಿ.
2) ಕಳೆದ ವರ್ಷ ಮಳೆ ಕೊರತೆಯಿಂದ ಡ್ಯಾಂ ಭರ್ತಿಯಾಗದೆ ಸಂಕಷ್ಟದಲ್ಲಿ ಅಚ್ಚುಕಟ್ಟು ಪ್ರದೇಶದ ರೈತರು ಖುಷ್.
3) 105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ ಇದೆ 93.463 ಟಿಎಂಸಿ ನೀರು
4) 1,633 ಅಡಿ ಜಲಾಶಯ ಮಟ್ಟದಲ್ಲಿ 1630 ಅಡಿ ಭರ್ತಿ, ಇದೆ 85,148 ಕ್ಯುಸೆಕ್ಸ್ ಒಳಹರಿವು
ಕೊಪ್ಪಳ : ತುಂಗಭದ್ರಾ ಜಲಾಶಯ ಭರ್ತಿಗೆ ಕೇವಲ ಎರಡು ಅಡಿ ಬಾಕಿ ಇರುವ ಹಿನ್ನೆಲೆಯಲ್ಲಿ ಜಲಾಶಯದ ಹತ್ತು ಕ್ರಸ್ಟ್ ಗೇಟ್ ಗಳನ್ನು ಒಂದು ಅಡಿ ಎತ್ತರಿಸಿ ನದಿಗೆ ನೀರು ಹರಿಸಲಾಗುತ್ತಿದೆ.
ಕಳೆದ ಸೋಮವಾರ ಡ್ಯಾಂನ ಮೂರು ಕ್ರಸ್ಟ್‌ಗೇಟ್ ಗಳನ್ನು ಒಂದು ಅಡಿ ಎತ್ತರಿಸಿ 9 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲು ಆರಂಭಿಸಲಾಗಿತ್ತು. ಒಳಹರಿವು ಮುಂದುವರೆದಿದ್ದು, ಜಲಾಶಯದ ಸಂಗ್ರಹ ಮಟ್ಟ ಹೆಚ್ಚಾದ ಹಿನ್ನೆಲೆಯಲ್ಲಿ ಬುಧವಾರ ಮತ್ತೆ 7 ಗೇಟ್‌ಗಳನ್ನು ಒಂದು ಅಡಿ ಎತ್ತರಿಸಿ ನದಿಗೆ ನೀರು ಹರಿಸಲಾಗುತ್ತಿದ್ದು, ಡ್ಯಾಂನ ಗೇಟ್ ನಂಬರ್ 12ರಿಂದ 21ರವರೆಗೆ ಒಟ್ಟು 10 ಗೇಟ್‌ಗಳ ಮೂಲಕ 18,686 ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.
ಟಿಬಿ ಡ್ಯಾಂನಲ್ಲಿ ನೀರಿನ ಸಂಗ್ರಹ ಮಟ್ಟ ಹೆಚ್ಚಾದಂತೆಲ್ಲ ನದಿಗೆ ಹರಿಸುವ ನೀರಿನ ಪ್ರಮಾಣವೂ ಹೆಚ್ಚಾಗಲಿದ್ದು, ಕೆಳಭಾಗದಲ್ಲಿರುವ ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರುಗುಪ್ಪ ಭಾಗದ ನದಿಪಾತ್ರದ ಮನೆಗಳು ಜಲಾವೃತವಾಗಲಿವೆ. ಜಲಾಶಯದಿಂದ ನದಿಗೆ ನೀರು ಬಿಟ್ಟ ಬಳಿಕ ಹಂಪಿಯ ಕೆಲ ಸ್ಮಾರಕಗಳು ಜಲಾವೃತವಾಗಿದ್ದು, ಹೆಚ್ಚಿನ ನೀರು ನದಿಗೆ ಬಿಟ್ಟಿರುವುದರಿಂದ ನದಿ ನೀರಿನ ಮಟ್ಟ ಹೆಚ್ಚಾಗಲಿದ್ದು, ಕೆಲ ಸ್ಮಾರಕಗಳು ಜಲಾವೃತವಾಗಲಿವೆ.
105.788 ಟಿಎಂಸಿ ಸಂಗ್ರಹ ಸಾಮರ್ಥ್ಯದ ತುಂಗಭದ್ರಾ ಜಲಾಶಯದಲ್ಲಿ ಸದ್ಯ 98.961 ಟಿಎಂಸಿ ನೀರು ಸಂಗ್ರಹವಾಗಿದೆ. 1,633 ಅಡಿ ಜಲಾಶಯ ಮಟ್ಟದಲ್ಲಿ 1631.28 ಅಡಿ ದಾಖಲಾಗಿದೆ. 87,700 ಕ್ಯುಸೆಕ್ ಒಳಹರಿವು ದಾಖಲಾಗಿದೆ.
ಮಲೆನಾಡು ಪ್ರದೇಶದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಬಳ್ಳಾರಿ, ಕೊಪ್ಪಳ, ರಾಯಚೂರು, ವಿಜಯನಗರ ಜಿಲ್ಲೆಗಳು ಮತ್ತು ನೆರೆಯ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಭರ್ತಿಗೆ ಕ್ಷಣಗಣನೆ ಶುರುವಾಗಿದ್ದು, ಸದ್ಯ ಮೇಲ್ಭಾಗದಿಂದ ಹರಿದುಬರುತ್ತಿರುವ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ.
( 2022ರಲ್ಲಿ 104 ಟಿಎಂಸಿ )
2022ರಲ್ಲಿ ಟಿಬಿ ಡ್ಯಾಂನಲ್ಲಿ ಜುಲೈ 12ರಂದು 98 ಟಿಎಂಸಿ ನೀರು ಸಂಗ್ರಹವಾಗಿತ್ತು. ಅದೇ ದಿನ ಜಲಾಶಯದ 12 ಕ್ರಸ್ಟ್‌ಗೇಟ್‌ಗಳ ಮೂಲಕ ನೀರು ನದಿಗೆ ಹರಿಸಲಾಗಿತ್ತು. ಇನ್ನು ಜುಲೈ 23ರ ಹೊತ್ತಿಗೆ ಜಲಾಶಯದಲ್ಲಿ 104.50 ಟಿಎಂಸಿ ನೀರು ಭರ್ತಿಯಾಗಿತ್ತು. 50 ಸಾವಿರ ಕ್ಯುಸೆಕ್ ಒಳಹರಿವು ಮತ್ತು 16 ಸಾವಿರ ಕ್ಯುಸೆಕ್ ಹೊರಹರಿವು ದಾಖಲಾಗಿತ್ತು. ಆದರೆ, 2023ರಲ್ಲಿ ಡ್ಯಾಂನಲ್ಲಿಸಂಗ್ರಹವಾಗಿದ್ದ ನೀರು ಅಳೆದು ತೂಗಿ ಬಳಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.
ಪ್ರತಿದಿನ 10 ಟಿಎಂಸಿ ನೀರು ನೀರಾವರಿ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ತುಂಗಾ ಮತ್ತು ಭದ್ರಾ ನದಿ ಜಲಾನಯನ ಪ್ರದೇಶಗಳಲ್ಲಿಉತ್ತಮ ಮಳೆ ಆಗುತ್ತಿರುವ ಹಿನ್ನೆಲೆ ಪ್ರತಿದಿನ ತುಂಗಾಭದ್ರ ಅಣೆಕಟ್ಟೆಗೆ 10 ಟಿಎಂಸಿ ನೀರು ಬರುತ್ತಿದ್ದು, ಇನ್ನು ಮೂರು ದಿನಗಳ ಒಳಗಾಗಿ ಡ್ಯಾಮ್ ಸಂಪೂರ್ಣ ತುಂಬುವ ನಿರೀಕ್ಷೆ ಇದೆ. ಪ್ರಸ್ತುತ 1.2 ಲಕ್ಷ ಕ್ಯೂಸೆಕ್ ಒಳಹರಿವು ಇದ್ದು, ಮುಂದಿನ ಮೂರು ಅಥವಾ ನಾಲ್ಕು ದಿನಗಳು ಇದೇ ರೀತಿ ಇರುವ ಸಾಧ್ಯತೆ ಇರುತ್ತದೆ ಈಗಾಗಲೇ ಅಧಿಕಾರಿಗಳು ಡ್ಯಾಮ್ ನಲ್ಲಿರುವ ನೀರನ್ನು ನದಿ ಮೂಲಕ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ನದಿ ಪಾತ್ರದ ಜನರು ಎಚ್ಚರಿಕೆಯಿಂದ ಇರಬೇಕು ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಹೇಳಿದ್ದಾರೆ.
ವರದಿ : ಶಿವಯ್ಯ ಕೆಂಭಾವಿಮಠ