ಬೆಂಗಳೂರು: ಭಾರಿ ಅಕ್ರಮಗಳಿಂದಾಗಿ ಮರು ಪರೀಕ್ಷೆ ನಡೆದಿದ್ದ 545 ಪಿಎಸ್‌ಐ ಹುದ್ದೆಗಳ ನೇಮಕಾತಿ ಗೊಂದಲಕ್ಕೆ ಸದ್ಯಕ್ಕೆ ತೆರೆ ಬೀಳುವ ಲಕ್ಷಣ ಕಾಣುತ್ತಿಲ್ಲ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮಾರ್ಚ್ 28ರಂದು ಪ್ರಕಟಿಸಿದ್ದ ಪರೀಕ್ಷೆಯ ಅಂತಿಮ ಅಂಕಪಟ್ಟಿ ಪ್ರಕಟಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ(ಕೆಎಟಿ) ತಡೆಯಾಜ್ಞೆ ನೀಡಿದೆ.
ಜನವರಿ 23ರಂದು ನಡೆದಿದ್ದ ಮರು ಪರೀಕ್ಷೆಯಲ್ಲಿ ಪತ್ರಿಕೆ -1ರ ಮೌಲ್ಯಮಾಪನ ಅಧಿಸೂಚನೆಯ ಮಾನದಂಡಗಳ ಅನುಸಾರ ನಡೆದಿಲ್ಲ ಎಂದು ದೂರಿದ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿದ್ದರು.
ಅವರ ಅರ್ಜಿಯನ್ನು ಪರಿಗಣಿಸಿದ ಕೆಎಟಿಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದ್ದ ಅಂತಿಮ ಅಂಕಪಟ್ಟಿ ಆದೇಶಕ್ಕೆ ಮುಂದಿನ ಆದೇಶದವರೆಗೆ ತಡೆ ನೀಡಿದೆ.
ಈಗಾಗಲೇ ಅಂತಿಮ ಅಂಕಪಟ್ಟಿ ಪ್ರಕಟಿಸಲಾಗಿದೆ. ಪಿಎಸ್‌ಐ ನೇಮಕಾತಿ ಪಟ್ಟಿ ಶೀಘ್ರವೇ ಬರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದ ಅಭ್ಯರ್ಥಿಗಳಿಗೆ ಈ ಆದೇಶದಿಂದ ನಿರಾಸೆ ಮೂಡಿಸಿದೆ.
ವಿಜಯಪುರ ಜಿಲ್ಲೆಯ ರವಿಕುಮಾರ್ ಸೇರಿದಂತೆ ಮೂವರು ಪತ್ರಿಕೆ -1ರ ಮೌಲ್ಯಮಾಪನ ಅಧಿಸೂಚನೆ ಪ್ರಕಾರ ಸರಿಯಾಗಿ ನಡೆದಿಲ್ಲವೆಂದು ದೂರಿದ್ದರು ಸರ್ಕಾರ ಮರು ಪರೀಕ್ಷೆಯನ್ನು ಕೆಇಎಗೆ ವಹಿಸಿತ್ತು.