ಬೆಂಗಳೂರು : ನಟ ದರ್ಶನ್ ಗೆ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ನೀಡಿರುವ ಘಟನೆಗೆ ಸಂಬಂಧಿಸಿದಂತೆ ಜೈಲಿನ 7 ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ನಟ ದರ್ಶನ್ ಸ್ಪೆಷಲ್ ಬ್ಯಾರಕ್ ನಿಂದ ಹೊರ ಬಂದು ಟೇಬಲ್, ಚೇರ್ ಹಾಕಿಕೊಂಡು ವಿಲ್ಸನ್ ಗಾರ್ಡನ್ ನಾಗ ಹಾಗೂ ಮತ್ತಿತರರ ಜೊತೆ ಸಿಗರೇಟ್ ಸೇದುತ್ತಾ, ಕಾಫಿ ಮಗ್ ಹಿಡಿದು ನಗುತ್ತಾ ಕುಳಿತಿರುವ ಫೋಟೋ ವೈರಲ್ ಆಗಿದೆ.ಅಲ್ಲದೇ ದರ್ಶನ್ ಗೆ ಜೈಲಿನಿಂದಲೇ ವಿಡಿಯೋ ಕಾಲ್ ಮಾಡುವ ವ್ಯವಸ್ಥೆಯೂ ಆಗಿದೆ ಎಂದು ಹೇಳಲಾಗುತ್ತಿದೆ.
ಶರಣಬಸವ ಅಮೀನ್ ಗಡ, ಪುಟ್ಟಸ್ವಾಮಿ, ಖಂಡೇವಾಲಾ, ಶ್ರೀಕಾಂತ್, ವೆಂಕಪ್ಪ, ವಾರ್ಡರ್ ಬಸಪ್ಪ, ಸಂಪತ್ ಸೇರಿದಂತೆ ಏಳು ಮಂದಿಯನ್ನು ಅಮಾನತು ಮಾಡಲಾಗಿದೆ. ಮುಂದೆಇಂತಹ ಘಟನೆಗಳು ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ.
ಜೈಲಿನ ಹಿರಿಯ ಅಧಿಯಕಾರಿಗಳ ಬಗ್ಗೆ ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.ಈ ಪ್ರಕರಣದಲ್ಲಿ ಜೈಲಿನ ಹಿರಿಯ ಅಧಿಕಾರಿಗಳು ಶಾಮೀಲು ಆಗಿರುವುದು ಗೊತ್ತಾದರೆ ಅವರನ್ನು ಕೂಡ ಅಮಾನತು ಮಾಡುತ್ತೇವೆ ಎಂದು ಹೇಳಿದರು.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ನೀಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದ್ದು, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಪೊಲೀಸ್ ಅಧಿಕಾರಿಗಳ ವಿರುದ್ಧ ಗರಂ ಆಗಿ ತನಿಖೆಗೆ ಸೂಚನೆ ನೀಡಿದ್ದಾರೆ.