ಮಡಿಕೇರಿ: ನಕಲಿ ಅಂಕಪಟ್ಟಿ ಸಲ್ಲಿಸಿ ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆದು ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ 7 ವರ್ಷ ಕಠಿಣ ಶಿಕ್ಷೆ ಮತ್ತು 1.25 ಲಕ್ಷ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಕಾರೆಕಾಡು ಗ್ರಾಮದ ಸಂದೇಶ್ ಎಂ.ಬಿ.(32) ಶಿಕ್ಷೆಗೆ ಒಳಗಾದ ವ್ಯಕ್ತಿ.2019 ನೇ ಸಾಲಿನಲ್ಲಿ ಅಂಚೆ ಇಲಾಖೆಯಲ್ಲಿ ನಡೆದ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆಯ ನೇಮಕಾತಿಯಲ್ಲಿ ಆನ್ಲೈನ್ ಮೂಲಕ ಸಂದೇಶ್ ಅರ್ಜಿ ಸಲ್ಲಿಸಿದ್ದು, ದಾಖಲೆ ಪರಿಶೀಲನೆಯ ಸಂದರ್ಭದಲ್ಲಿ ಅವರು ನಕಲಿ ಅಂಕಪಟ್ಟಿ ಸಲ್ಲಿಸಿರುವುದು ಪತ್ತೆಯಾಗಿತ್ತು.
ಅಂಚೆ ಇಲಾಖೆಯಲ್ಲಿ ಉದ್ಯೋಗ ಪಡೆಯುವ ಮೂಲಕ ವಂಚಿಸಿದ್ದ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು 2022ರ ಫೆಬ್ರವರಿ 25ರಂದು ಆರೋಪಿ ಸಂದೇಶವನ್ನು ಬಂಧಿಸಿ ಕೋರ್ಟ್ ಗೆ ಹಾಜರುಪಡಿಸಿದ್ದರು.
ಮಡಿಕೇರಿ ನಗರ ಠಾಣೆ ಪಿಎಸ್‌ಐ ಶ್ರೀನಿವಾಸ್ ಮತ್ತು ತನಿಖಾ ಸಹಾಯಕಿ ಹೆಚ್.ಸಿ. ದಿವ್ಯಾ ಅವರು ಪ್ರಕರಣದ ತನಿಖೆ ಕೈಗೊಂಡು 2022ರ ಡಿಸೆಂಬರ್ 27ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸಿಜೆಎಂ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜನವರಿ 10ರಂದು ತೀರ್ಪು ಪ್ರಕಟಿಸಿದೆ.