ಬೆಂಗಳೂರು : ರಾಜ್ಯಾದ್ಯಂತ ಗ್ಯಾರಂಟಿ ಯೋಜನೆಗಳಿಂದ ಶೇ.70 ರಿಂದ 95 ರಷ್ಟು ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಾತಿ, ಧರ್ಮಗಳ ಬೇಧವಿಲ್ಲದೆ ನಾಡಿನ ಸರ್ವರನ್ನೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಿ, ಆ ಮೂಲಕ ಸಶಕ್ತ ಕರ್ನಾಟಕವನ್ನು ನಿರ್ಮಾಣ ಮಾಡುವ ಗುರಿ ನಮ್ಮದು.ನಾವು ಜಾರಿಗೆ ತಂದ ಗ್ಯಾರಂಟಿ ಯೋಜನೆಗಳು ನಮ್ಮೆಲ್ಲಾ ಉದ್ದೇಶಗಳನ್ನು ಸಮರ್ಪಕವಾಗಿ ಪೂರೈಸುತ್ತಿದೆ.
5 ಯೋಜನೆಗಳು ಗ್ರಾಮೀಣ ಮಟ್ಟದಲ್ಲಿ ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿದ್ದು, ರಾಜ್ಯಾದ್ಯಂತ ಶೇ.70 ರಿಂದ 95 ರಷ್ಟು ಮಹಿಳೆಯರ ಜೀವನ ಮಟ್ಟ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.
ಶಕ್ತಿ, ಗೃಹಜ್ಯೋತಿ ಉಳಿತಾಯದ ಹಣ ಮತ್ತು ಗೃಹಲಕ್ಷ್ಮಿ ಹಣವನ್ನು ಪ್ರಮುಖವಾಗಿ ಆಹಾರ ಪದಾರ್ಥಗಳ ಖರೀದಿಗೆ ಬಳಸುತ್ತಿದ್ದಾರೆ. ಇದರ ಪರಿಣಾಮವಾಗಿ ಶೇ.88 ರಷ್ಟು ಕುಟುಂಬಗಳು ಉತ್ತಮ ಮತ್ತು ಪೌಷ್ಟಿಕಾಂಶಯುಕ್ತ ಆಹಾರವನ್ನು ಸೇವಿಸುತ್ತಿದ್ದಾರೆ.
ಶೇ.83 ರಷ್ಟು ಮಹಿಳೆಯರು ವೈದ್ಯಕೀಯ ಚಿಕಿತ್ಸೆ, ಆಸ್ಪತ್ರೆ ವೆಚ್ಚ, ಪರೀಕ್ಷೆಗಳು ಮತ್ತು ಔಷಧಿಗಳ ಬಗ್ಗೆ ಹೆಚ್ಚು ಚಿಂತಿಸದೆ ತಮ್ಮ ಆರೋಗ್ಯದ ಮೇಲೆ ಕಾಳಜಿ ವಹಿಸಲು ಗ್ಯಾರಂಟಿಗಳು ಸಹಕಾರಿಯಾಗಿವೆ.
ಈ ಅಂಶಗಳು ಲೋಕನೀತಿ – ಸಿಎಸ್‌ಡಿಎಸ್, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಇಂಡೆಸ್ ಆಕ್ಷನ್ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಅಧ್ಯಯನದಿಂದ ಬಹಿರಂಗವಾಗಿದೆ.
ಒಂದೊಳ್ಳೆ ಉದ್ದೇಶದೊಂದಿಗೆ ನಾವು ಜಾರಿಗೊಳಿಸಿದ ಯೋಜನೆಗಳು ನಿರೀಕ್ಷೆಗೂ ಮೀರಿ ಅರ್ಹರನ್ನು ತಲುಪಿರುವುದು ನನ್ನಲ್ಲಿ ಸಾರ್ಥಕತೆಯ ಭಾವನೆ ಮೂಡಿಸಿದೆ.
ನಾವು ಸಾಧಿಸಿದ್ದಕ್ಕಿಂತ, ಇನ್ನೂ ಸಾಧಿಸಬೇಕಾದದ್ದು ಬಹಳಷ್ಟಿದೆ ಎಂಬ ಅರಿವು ನಮಗಿದೆ. ನಮ್ಮ ಅಧಿಕಾರಾವಧಿಯಲ್ಲಿ ಮತ್ತಷ್ಟು ಮಗದಷ್ಟು ಕರ್ನಾಟಕ ಪ್ರಗತಿ ಕಾಣುವುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಹೇಳಿದ್ದಾರೆ.




