ಬೆಳಗಾವಿ: ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ(SGFI) ಆಯೋಜಿಸಿರುವ ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ಶಿಪ್ಗೆ ಬೆಳಗಾವಿ ಜಿಲ್ಲೆಯ ಗ್ರಾಮೀಣ ಭಾಗದ 7 ಕ್ರೀಡಾಪಟುಗಳು ಆಯ್ಕೆಯಾಗಿದ್ದಾರೆ. ಮಣಿಪುರದ ಇಂಫಾಲ್ನಲ್ಲಿ ಏಪ್ರಿಲ್ 6ರಿಂದ ಸ್ಪರ್ಧೆ ನಡೆಯಲಿದೆ.
ಕರ್ನಾಟಕದಿಂದ 20 ಕ್ರೀಡಾಪಟುಗಳು ರಾಷ್ಟ್ರೀಯ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ಗೆ ಆಯ್ಕೆಯಾಗಿದ್ದಾರೆ. ಈ ಪೈಕಿ ಏಳು ಮಂದಿ ಬೆಳಗಾವಿ ಜಿಲ್ಲೆಯವರಾಗಿದ್ದರೆ. ಅದರಲ್ಲೂಹಳ್ಳಿ ಪ್ರತಿಭೆಗಳೇ ಎನ್ನುವುದು ಮತ್ತೊಂದು ವಿಶೇಷ.
ಈ ಏಳು ಕ್ರೀಡಾಪಟುಗಳಲ್ಲಿ ಐವರು ಕಡೋಲಿ ಗ್ರಾಮದವರು. ಕಡೋಲಿ ಕೃಷಿಗೆ ಮಾತ್ರವಲ್ಲದೇ ಕ್ರೀಡಾ ಕ್ಷೇತ್ರದಲ್ಲೂ ಹೆಸರುವಾಸಿ. ಖೋ ಖೋ, ಕುಸ್ತಿ, ರನ್ನಿಂಗ್, ಕ್ರಿಕೆಟ್, ಫುಟ್‌ಬಾಲ್, ಈಜು ಮತ್ತು ಸೈಕ್ಲಿಂಗ್ ಸೇರಿ ಮತ್ತಿತರ ಕ್ರೀಡೆಗಳಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಲ್ಲಿನ ಕ್ರೀಡಾಪಟುಗಳು ಸಾಧನೆಗೈದಿದ್ದಾರೆ. ಇದೀಗ ಸಾಧನೆಗಳ ಪಟ್ಟಿಗೆ ವೇಟ್ ಲಿಫ್ಟಿಂಗ್ ಸೇರ್ಪಡೆಯಾಗಿದೆ.
ಕಡೋಲಿ ಗ್ರಾಮದ ಶಿವಾಜಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾದ ಆದರ್ಶ ಧಾಯಗೊಂಡೆ, ನಾಗೇಶ ಅನಗೋಳ್ಕರ್, ಶ್ರದ್ಧಾ ಕಾಸರ್, 9ನೇ ತರಗತಿ ವಿದ್ಯಾರ್ಥಿನಿ ಸೃಷ್ಟಿ ಮುತಗೇಕರ್, ಕಡೋಲಿಯ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಪುರ್ವಿತಾ ದೋಮನೆ, ಕಲ್ಲೇಹೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ವರುಣ ಬೆನಕೆ ಹಾಗೂ ಬೆಳಗಾವಿ ನಗರದ ಮರಾಠಿ ವಿದ್ಯಾನಿಕೇತನ ಶಾಲೆಯ 10ನೇ ತರಗತಿಯ ಅದಿತಿ ಪಾಟೀಲ್ ರಾಷ್ಟ್ರಮಟ್ಟದ ವೇಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ಗೆ ಆಯ್ಕೆಯಾದವರು.
2024ರ ನವೆಂಬರ್ನಲ್ಲಿ ಮಂಗಳೂರಿನ ಬಂಟ್ವಾಳದಲ್ಲಿ ನಡೆದ ರಾಜ್ಯ ಮಟ್ಟದ ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಈ ಏಳು ಆಟಗಾರರು ಚಾಂಪಿಯನ್ ಆಗಿದ್ದರು. ಇದೀಗ 52 ಕೆಜಿ, 58 ಕೆಜಿ, 62 ಕೆಜಿ, 70 ಕೆಜಿ, 74 ಕೆಜಿ, 80 ಕೆಜಿ ಮತ್ತು 80+ ಕೆಜಿ ವಿಭಾಗಗಳಲ್ಲಿ ಸ್ಪರ್ಧಿಸುತ್ತಿದ್ದಾರೆ. ಇವರಿಗೆ ಕರ್ನಾಟಕ ತಂಡದ ಜನರಲ್ ಮ್ಯಾನೇಜರ್ ಆಗಿ ಆಯ್ಕೆಯಾಗಿರುವ ರಮೇಶ ಅಳಗುಡೇಕರ್ ಮತ್ತು ಕೋಚ್ ಸದಾನಂದ ಮಾಳಶೆಟ್ಟಿ ಅವರು ತರಬೇತಿ ನೀಡಿದ್ದಾರೆ. ಬೆಳಗಾವಿ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿನಿತ್ಯ 3-4 ಗಂಟೆ ಕಠಿಣ ಅಭ್ಯಾಸ ಮಾಡುತ್ತಿದ್ದಾರೆ.
ಏಳು ಆಟಗಾರರ ಪೈಕಿ ನಾಲ್ವರಿಗೆ ಏಪ್ರಿಲ್ 4ರವರೆಗೆ ಎಸ್ಎಸ್ಎಲ್ಸಿ ಪರೀಕ್ಷೆ ಇದೆ. ಹಾಗಾಗಿ, ಅವರು ಪರೀಕ್ಷೆ ಮುಗಿಸಿ ಬೆಂಗಳೂರಿನಿಂದ ವಿಮಾನದ ಮೂಲಕ ಮಣಿಪುರಕ್ಕೆ ತೆರಳಲಿದ್ದಾರೆ. ಮೂವರು ಆಟಗಾರರು ಈಗಾಗಲೇ ರೈಲಿನಲ್ಲಿ ಮಣಿಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ವಿಮಾನ ಪ್ರಯಾಣದ ವೆಚ್ಚವನ್ನು ಅವರ ಪಾಲಕರೇ ಹೊಂದಿಸಿದ್ದಾರೆ. ಸರ್ಕಾರ ಮತ್ತು ದಾನಿಗಳ ನೆರವಿನ ನಿರೀಕ್ಷೆಯಲ್ಲಿ ಈ ಮಕ್ಕಳಿದ್ದಾರೆ.