ಸೇಡಂ: ಕೋಡ್ಲಾ ಗ್ರಾಮದಲ್ಲಿರುವ ಶ್ರೀ ಉರಿಲಿಂಗಪೆದ್ದಿಶ್ವರ ಮಹಾಸಂಸ್ಥಾನ ಮಠದ ಶ್ರೀ ಶಿವಯೋಗೀಶ್ವರರ 78ನೇ ಪುಣ್ಯಸ್ಮರಣೆ ಹಾಗೂ 46ನೇ ಜಾತ್ರೋತ್ಸವ ಏ.4ರಂದು ನಡೆಯಲಿದೆ ಎಂದು ಕೋಡ್ಲಾ-ಮೈಸೂರು ಶ್ರೀ ಉರಿಲಿಂಗ ಪೆದ್ದೀಶ್ವರ ಮಹಾಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಜ್ಞಾನಪ್ರಕಾಶ ಮಹಾಸ್ವಾಮೀಜಿ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಾತ್ರೆ ನಿಮಿತ್ತ ಗುರುವಾರದಿಂದ ಏ.4ರವರೆಗೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ.
ಗುರುವಾರ ಬೆಳಗ್ಗೆ 8ಕ್ಕೆ ಷಟಸ್ಥಲ ಧ್ವಜಾರೋಹಣ ನಡೆಯಲಿದ್ದು, ಕೋಡ್ಲಾ ಶಂಭುಲಿಂಗೇಶ್ವರ ವಿರಕ್ತ ಮಠದ ಶ್ರೀ ಶಂಭುಲಿಂಗೇಶ್ವರ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಬಸವನಾಗಿದೇವ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ. ಶುಕ್ರವಾರ ಮಧ್ಯಾಹ್ನ 2ಕ್ಕೆ ವಚನಗೋಷ್ಠಿ, ಕವಿಗೋಷ್ಠಿ ನಡೆಯಲಿದೆ. ಚಿತ್ರದುರ್ಗದ ಶ್ರೀ ಬಸವನಾಗಿದೇವ ಸ್ವಾಮೀಜಿ, ಶ್ರೀ ಸಿದ್ಧರಾಮ ಶಿವಯೋಗಿ ಸ್ವಾಮೀಜಿ, ಮಹಾದೇವ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ , ಮುಡಬಿ ಗುಂಡೇರಾವ್, ತಿಪ್ಪಯ್ಯ ದೇವನೂರ ಭಾಗವಹಿಸಲಿದ್ದಾರೆ. ಸಂಜೆ 5.15ಕ್ಕೆ ಬಸ್ ನಿಲ್ದಾಣ ಪಕ್ಕದಲ್ಲಿರುವ ಬಸವೇಶ್ವರ ಮೂರ್ತಿಯಿಂದ ಉರಿಲಿಂಗ ಪೆದ್ದೀಶ್ವರ ಮಠದವರೆಗೆ ಶ್ರೀ ಶಿವಯೋಗೀಶ್ವರ ಭವ್ಯ ಮೆರವಣಿಗೆ ನಡೆಯಲಿದೆ. ಎಂದು ಹೇಳಿದ್ದಾರೆ.
ಏ.4ರಂದು ಸಂಜೆ 6.30ಕ್ಕೆ ಗುರಮಠಕಲ್ ಖಾಸಾ ಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮಿಗಳ ಸಾನ್ನಿಧ್ಯದಲ್ಲಿ ಕುಂಭಮೇಳ, ಪಲ್ಲಕ್ಕಿ ಮೆರವಣಿಗೆ, ಭಜನೆ, ಪುರವಂತರ ಸೇವೆಯೊಂದಿಗೆ ಭವ್ಯ ರಥೋತ್ಸವ ಜರುಗಲಿದೆ. 7.15ಕ್ಕೆ ಶರಣ ತತ್ವ ದರ್ಶನ ಹಾಗೂ ಸಮಾನತೆ ಸಮಾವೇಶ ನಡೆಯಲಿದೆ. ಭಾಲ್ಕಿಯ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು, ಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿ, ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿ, ಸಚಿವರಾದ ಡಾ.ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕ ಪ್ರಸಾದ ಅಬ್ಬಯ್ಯ ಸೇರಿ ಹಲವರು ಭಾಗಿಯಾಗಲಿದ್ದಾರೆ. ರಾತ್ರಿ 8.30ಕ್ಕೆ ಸಾಣೆಹಳ್ಳಿಯ ಶಿವಕುಮಾರ ಕಲಾ ಸಂಘ ಅಭಿನಯದ ಶರಣ ಉರಿಲಿಂಗ ಪೆದ್ದಿ ನಾಟಕ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




