ಬೆಳಗಾವಿ: ಗರ್ಭಿಣಿಯ ಹೊಟ್ಟೆಯಲ್ಲಿಯೇ 8 ತಿಂಗಳ ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತೆಗಳಿಗೆ ಅಲೆದಾಡಿ, ಅಲೆದಾಡಿ ಇಂದು ತಾಯಿ ಕೂಡ ಮೃತಪಟ್ಟಿರುವ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ಮೂಲದ ರಾಧಿಕಾ ಗಡ್ಡಹೊಳಿ ಎಂಬುವವರು 8 ತಿಂಗಳ ಗರ್ಭಿಣಿಯಾಗಿದ್ದರು.ಡಿ.28ರಂದು ಪಿಡ್ಸ್ ಬಂದ ಕಾರಣ ಕುಟುಂಬದವರು ತಕ್ಷಣ ಆಕೆಯನ್ನು ಯಮಕನಮರಡಿ ಆಸ್ಪತ್ರೆಗೆ ದಾಖಲಿಸಿದ್ದರು.
ಪ್ರಾಥಮಿಕ ಚಿಕಿತ್ಸೆ ಬಳಿಕ ಬೆಳಗಾವಿಯ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾಗಲೇ ಹಲವು ಬಾರಿ ರಾಧಿಕಾ ಪಿಡ್ಸ್ ನಿಂದ ಬಳಲುತ್ತಿದ್ದರು.
ಮಗು ಕೂಡ ಹೊಟ್ಟೆಯಲ್ಲೇ ಸಾವನ್ನಪ್ಪಿತ್ತು. ಖಾಸಗಿ ಆಸ್ಪತ್ರೆಯಿಂದ ರಾಧಿಕಾ ಅವರನ್ನು ಬೆಳಗಾವಿ ಜಿಲ್ಲಾಸ್ಪತ್ರೆ ಬಿಮ್ಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.
ಹೊಟ್ಟೆಯಲ್ಲೇ ಮಗು ಸಾವನ್ನಪ್ಪಿ ಹಲವು ಗಂಟೆ ಕಳೆದ ಪರಿಣಾಮ ತಾಯಿ ರಾಧಿಕಾ ಸ್ಥಿತಿ ಗಂಭೀರವಾಗಿತ್ತು. ಮಗುವನ್ನು ಹೊರತೆಗೆಯಲು ವೈದ್ಯರು ಹರಸಾಹಸಪಟ್ಟಿದ್ದರು.
ನುರಿತ ವೈದರ ಕೊರತೆ ಕಾರಣಕ್ಕೆ ಬಿಮ್ಸ್ ನಿಂದ ರಾಧಿಕಾ ಅವರನ್ನು ಹುಬ್ಬಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೊಟ್ಟೆಯಲ್ಲಿದ್ದ ಮಗುವನ್ನು ಹೊರತೆಗೆಯಲಾಗಿತ್ತು. ಆದರೆ ತಾಯಿ ಸ್ಥಿತಿ ಚಿಂತಾಜನಕವಾಗಿತ್ತು.
ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ತಾಯಿ ರಾಧಿಕಾ ಕೂಡ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಪತಿ ಸಾವನ್ನಪ್ಪಿದ ವಿಷಯ ಕೇಳಿ ರಾಧಿಕಾ ಪತಿ ಮಲ್ಲೇಶ್ (25) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.