ನವದೆಹಲಿ: ಸುಪ್ರೀಂ ಕೋರ್ಟ್ ನಲ್ಲಿ 82,831 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಪೂರ್ಣ ಪ್ರಮಾಣದಲ್ಲಿ ನ್ಯಾಯಮೂರ್ತಿಗಳ ನೇಮಕಾತಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದರೂ ವಿಚಾರಣೆ ಪೂರ್ಣವಾಗದೆ ಉಳಿಯುವ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಲೇ ಇದೆ.
2009ರಲ್ಲಿ ಸುಪ್ರೀಂ ಕೋರ್ಟ್ ಜಡ್ಜ್ ಗಳ ಸಂಖ್ಯೆಯನ್ನು 26 ರಿಂದ 31ಕ್ಕೆ ಹೆಚ್ಚಳ ಮಾಡಲಾಗಿದೆ.ಆದರೂ 50,000 ಇದ್ದ ಪ್ರಕರಣಗಳ ಸಂಖ್ಯೆ 2013ರಲ್ಲಿ 66 ಸಾವಿರಕ್ಕೆ ಏರಿಕೆಯಾಗಿದೆ. 2019ರಲ್ಲಿ ಜಡ್ಜ್ ಗಳ ಸಂಖ್ಯೆಯನ್ನು 31 ರಿಂದ 34ಕ್ಕೆ ಹೆಚ್ಚಳ ಮಾಡಿದ ನಂತರ ಮೊದಲ ಬಾರಿಗೆ ಬಾಕಿ ಪ್ರಕರಣಗಳ ಸಂಖ್ಯೆ 82,000 ಗಡಿ ದಾಟಿದೆ.
2014ರಲ್ಲಿ ಸಿಜೆಐ ಪಿ. ಸದಾಶಿವಂ, ಆರ್.ಎಂ. ಲೋಧಾ ಅವರ ಅವಧಿಯಲ್ಲಿ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ 63,000 ಇತ್ತು. 2015ರಲ್ಲಿ ಸಿಜೆಐ ಹೆಚ್.ಎಲ್. ದತ್ತು ಅವಧಿಯಲ್ಲಿ ಬಾಕಿ ಉಳಿದ ಪ್ರಕರಣಗಳ ಸಂಖ್ಯೆ 59,000 ಕ್ಕೆ ಇಳಿಕೆಯಾಗಿದ್ದು, 2016ರಲ್ಲಿ ಸಿಜೆಐ ಟಿ.ಎಸ್. ಠಾಕೂರ್ ಅವಧಿಯಲ್ಲಿ ಕೇಸ್ ಗಳ ಸಂಖ್ಯೆ 63,000 ಕ್ಕೆ ಹೆಚ್ಚಳವಾಯಿತು. 2017ರಲ್ಲಿ ಸಿಜೆಐ ಜೆ.ಎಸ್. ಖೆಹರ್ ಅವಧಿಯಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ 56,000ಕ್ಕೆ ಇಳಿಕೆಯಾಯಿತು.
2018ರಲ್ಲಿ ಸಿಜೆಐ ದೀಪಕ್ ಮಿಶ್ರಾ ಅವಧಿಯಲ್ಲಿ ಬಾಕಿ ಪ್ರಕರಣಗಳ ಸಂಖ್ಯೆ 57,000 ಇತ್ತು. ವರ್ಷದಿಂದ ವರ್ಷಕ್ಕೆ ಬಾಕಿ ಪ್ರಕರಣಗಳ ಸಂಖ್ಯೆ ಏರುತ್ತಿವೆ.
ಬಾಕಿ ಉಳಿದ ಪ್ರಕರಣಗಳಲ್ಲಿ ಶೇಕಡ 33% ರಷ್ಟು ಒಂದು ವರ್ಷ ಹಳೆಯ ಪ್ರಕರಣಗಳಾಗಿವೆ. 2024ರಲ್ಲಿ 38,995 ಕೇಸುಗಳು ದಾಖಲಾಗಿದ್ದು, 37,158 ಕೇಸ್ ಇತ್ಯರ್ಥಪಡಿಸಲಾಗಿದೆ.
61 ಲಕ್ಷ ಪ್ರಕರಣಗಳು ಹೈಕೋರ್ಟ್ ಗಳಲ್ಲಿ ಬಾಕಿ ಇದ್ದು, ವಿಚಾರಣಾ ನ್ಯಾಯಾಲಯಗಳಲ್ಲಿ 4.5 ಕೋಟಿ ಪ್ರಕರಣಗಳು ಬಾಕಿ ಇವೆ.