ದಾಂಪತ್ಯ ಜೀವನದಲ್ಲಿ ಪ್ರೀತಿ ನಂಬಿಕೆ, ವಿಶ್ವಾಸ ತುಂಬಾನೇ ಮುಖ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಪತಿ ಪತ್ನಿಯರ ನಡುವಿನ ಪ್ರೀತಿಯ ಬಂಧ ಕುಸಿಯುತ್ತಿದ್ದು, ಡಿವೋರ್ಸ್‌ಗಳ ಸಂಖ್ಯೆ ಹೆಚ್ಚುತ್ತಿದೆ. ಹೀಗೆ ಮದುವೆ, ದಾಂಪತ್ಯ ಜೀವನವೇ ಬಹುದೊಡ್ಡ ಸವಾಲಾಗಿರುವ ಕಾಲದಲ್ಲಿ ನಾವಿದ್ದೇವೆ.
ಹೀಗಿರುವಾಗ ಇಲ್ಲೊಂದು ಶತಾಯುಷಿ ದಂಪತಿ 84 ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸುವ ಮೂಲಕ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಪ್ರೀತಿಸಿ ಮದುವೆಯಾದ ಈ ಜೋಡಿ 13 ಮಕ್ಕಳು, 100 ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದಿದ್ದು, ಇದೀಗ ಸುದೀರ್ಘ ದಾಂಪತ್ಯ ಜೀವನ ನಡೆಸುವ ಮೂಲಕ ಈ ವೃದ್ಧ ದಂಪತಿ ದಾಖಲೆಯನ್ನು ಬರೆದಿದ್ದಾರೆ.
ಬ್ರೆಜಿಲ್‌ನ ಮನೋಯೆಲ್ ಆಂಜೆಲಿಮ್ ಡಿನೋ ಮತ್ತು ಮಾರಿಯಾ ಡಿ ಸೌಸಾ ಡಿನೋ ದಂಪತಿ ಸುದೀರ್ಘ ಕಾಲ ದಾಂಪತ್ಯ ಜೀವನ ನಡೆಸಿದ ದಂಪತಿ ಎಂಬ ಗಿನ್ನೆಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಮದುವೆಯಾಗಿ 84 ವರ್ಷ 77 ದಿನಗಳನ್ನು ಅದ್ಭುತವಾಗಿ ಕಳೆದಿರುವ ಈ ಜೋಡಿಯ ಪ್ರೇಮಕಥೆ ಆರಂಭವಾಗಿದ್ದು, 1936 ರಲ್ಲಿ. ಇದಾದ ಬಳಿಕ ನಾಲ್ಕು ವರ್ಷಗಳ ನಂತರ, 1940 ರಲ್ಲಿ, ಅವರು ಬ್ರೆಜಿಲ್‌ನ ಸಿಯೆರಾದಲ್ಲಿರುವ ಪ್ರಾರ್ಥನಾ ಮಂದಿರದಲ್ಲಿ ಪ್ರತಿಜ್ಞೆ ವಿನಿಮಯ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಂದಿನಿಂದ ಇಂದಿನವರೆಗೆ ಈ ದಂಪತಿ ಒಟ್ಟಿಗೆ ಸುಂದರವಾದ ಜೀವನವನ್ನು ನಡೆಸಿಕೊಂಡು ಬಂದಿದ್ದಾರೆ. ಜೊತೆಗೆ ಈ ದಂಪತಿ 13 ಮಕ್ಕಳು, 55 ಮೊಮ್ಮಕ್ಕಳು, 54 ಮರಿ ಮೊಮ್ಮಕ್ಕಳು ಹೀಗೆ ಒಟ್ಟು 100 ಕ್ಕೂ ಹೆಚ್ಚು ಮೊಮ್ಮಕ್ಕಳನ್ನು ಹೊಂದುವ ಮೂಲಕ ದೊಡ್ಡ ಕುಟಂಬವನ್ನೇ ರಚಿಸಿದ್ದಾರೆ.
105 ವರ್ಷ ವಯಸ್ಸಿನ ಮನೋಯೆಲ್ ಮತ್ತು 101 ವರ್ಷ ವಯಸ್ಸಿನ ಮಾರಿಯಾ ಇಂದು ಶಾಂತಿಯುತ ಮತ್ತು ಪ್ರೀತಿಯ ಜೀವನವನ್ನು ಆನಂದಿಸುತ್ತಿದ್ದಾರೆ. ಈ ಮೂಲಕ ಈ ಶತಾಯುಷಿ ದಂಪತಿ 84 ವರ್ಷದ ಸುದೀರ್ಘ ದಾಂಪತ್ಯ ಜೀವನವನ್ನು ನಡೆಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ.
ವಯಸ್ಸಿನ ಕಾರಣದಿಂದಾಗಿ, ಮನೋಯೆಲ್ ದಿನದ ಹೆಚ್ಚಿನ ಸಮಯ ವಿಶ್ರಾಂತಿ ಪಡೆಯುತ್ತಾರೆ. ಆದರೆ ಪ್ರತಿದಿನ ಅವರು ಪತ್ನಿ ಮಾರಿಯಾ ಜೊತೆ ಸಂಜೆ 6 ಗಂಟೆಗೆ ರೇಡಿಯೊ ಕೇಳುತ್ತಾರಂತೆ. ತಮ್ಮ ಈ ಸುದೀರ್ಘ ಸುಖಿ ದಾಂಪತ್ಯ ಜೀವನದ ರಹಸ್ಯವೇ ʼಪ್ರೀತಿʼ ಎನ್ನುತ್ತಾರೆ ಈ ವೃದ್ಧ ದಂಪತಿ.
ಶತಾಯುಷಿಗಳ ಸ್ಪೂರ್ತಿದಾಕ ಜೀವನದ ಕಥೆಗಳನ್ನು ಹೇಳುವ ಲಾಂಗೆವಿಕ್ವೆಸ್ಟ್ (longeviquest) ಸಂಸ್ಥೆಯು ಈ ದಂಪತಿಗಳ ಸ್ಪೂರ್ತಿದಾಯಕ ಸ್ಟೋರಿಯನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದೆ.
ಇದಕ್ಕೂ ಮೊದಲು, ಕೆನಡಾದ ಡೇವಿಡ್ ಜಾಕೋಬ್ ಹಿಲ್ಲರ್ ಮತ್ತು ಸಾರಾ ಡೇವಿ ಹಿಲ್ಲರ್ ಈ ದಾಖಲೆಯನ್ನು ನಿರ್ಮಿಸಿದ್ದರು. ಅವರು 88 ವರ್ಷ ಮತ್ತು 349 ದಿನಗಳ ಕಾಲ ದಾಂಪತ್ಯ ಜೀವನ ನಡೆಸಿದ್ದರು. ಇದೀಗ ಮನೋಯೆಲ್, ಮಾರಿಯಾ 84 ವರ್ಷಗಳ ಸುದೀರ್ಘ ದಾಂಪತ್ಯ ಜೀವನವನ್ನು ನಡೆಸುವ ಮೂಲಕ ಈ ದಾಖಲೆಯನ್ನು ಬರೆದಿದ್ದಾರೆ.