ಬಳ್ಳಾರಿ : ಈಗಾಗಲೇ ಮಂಡ್ಯದಲ್ಲಿ ಕಳೆದ 2 ದಿನಗಳಿಂದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ತೆರೆ ಬೀಳಲಿದೆ.
ಇನ್ನು ಮುಂದಿನ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಗಡಿನಾಡು ಬಳ್ಳಾರಿಯಲ್ಲಿ ನಡೆಸಲು ನಿರ್ಧರಿಸಲಾಗಿದೆ. ಈ ಮೂಲಕ 68 ವರ್ಷಗಳ ಬಳಿಕ ಗಣಿನಾಡಿಗೆ ನುಡಿತೇರು ಎಳೆಯುವ ಅವಕಾಶ ಸಿಕ್ಕಂತಾಗಿದೆ.
ಬಳ್ಳಾರಿಯಲಿ 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಕುರಿತು, ನಗರದಲ್ಲಿ ಶನಿವಾರ ರಾತ್ರಿ ಖಾಸಗಿ ಹೋಟೆಲ್‌ನಲ್ಲಿ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ನೇತೃತ್ವದಲ್ಲಿ ಜರುಗಿದ ಎಲ್ಲ ಜಿಲ್ಲೆಗಳ ಕಸಾಪ ಪ್ರತಿನಿಧಿಗಳ ಸಭೆಯಲ್ಲಿ ಗಡಿನಾಡು ಬಳ್ಳಾರಿಯಲ್ಲಿ ಮುಂದಿನ ಅಖಿಲ ಭಾರತ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
1926 ಹಾಗೂ 1938ರಲ್ಲಿ ಬಳ್ಳಾರಿಯಲ್ಲಿ ಸಮ್ಮೇಳನ ನಡೆದಿತ್ತು. ಸ್ವಾತಂತ್ರ್ಯಾನಂತರ 1958 ರಲ್ಲಿ ವಿ.ಕೃ.ಗೋಕಾಕ್ ಅವರ ಅಧ್ಯಕ್ಷತೆಯಲ್ಲಿ ಬಳ್ಳಾರಿಯ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆದಿತ್ತು. ಸುದೀರ್ಘ 66 ವರ್ಷಗಳ ಬಳಿಕ ಬಳ್ಳಾರಿಗೆ ಸಾಹಿತ್ಯ ಸಮ್ಮೇಳನದ ಅವಕಾಶ ದಕ್ಕಿದ್ದು ಬಳ್ಳಾರಿ ಜನತೆಯಲ್ಲಿ ಸಂತಸ ತಂದಿದೆ.
ಕಳೆದ ಬಾರಿ ಹಾವೇರಿಯಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ 87ನೇ ಸಮ್ಮೇಳನ ಬಳ್ಳಾರಿಗೆ ನೀಡಬೇಕು ಎಂಬ ತೀವ್ರ ಒತ್ತಾಯ ಕೇಳಿಬಂತು. ಆದರೆ ಕೊನೆ ಗಳಿಗೆಯಲ್ಲಿ ಮಂಡ್ಯದಲ್ಲಿ ಸಮ್ಮೇಳನ ನಡೆಸಲು ನಿರ್ಧರಿಸಲಾಯಿತು.
ಈ ಬಾರಿ ಚಿಕ್ಕಮಗಳೂರು, ಬಳ್ಳಾರಿ ಅಥವಾ ದೆಹಲಿಯಲ್ಲಿ ಸಮ್ಮೇಳನ ನಡೆಸುವ ಕುರಿತು ಚರ್ಚೆಗಳು ಸಾಗಿದ್ದವು. ಆದರೆ ಅಂತಿಮವಾಗಿ ಮುಂದಿನ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿ ನಡೆಸಲು ತೀರ್ಮಾನಿಸಿರುವುದು ಬಿಸಿಲೂರು ಜನರಲ್ಲಿ ಸಂತಸ ತಂದಿದೆ.