ತುರುವೇಕೆರೆ: ತಾಲ್ಲೂಕಿನಾದ್ಯಂತ ಗಾಂಜಾ ಮಾರಾಟ ಮತ್ತು ಸಂಗ್ರಹಣೆಯ ಆರೋಪದಡಿ ಪಟ್ಟಣದ ಪೊಲೀಸರು ಎಂಟು ಮಂದಿ ಮತ್ತು ತಾಲ್ಲೂಕು ಅಬಕಾರಿ ಇಲಾಖೆಯ ಅಧಿಕಾರಿಗಳು ಒರ್ವನು ಸೇರಿದಂತೆ 9 ಮಂದಿಯನ್ನು ಈಗಾಗಲೇ ಬಂಧಿಸಿದ್ದಾರೆ.
ಆರೋಪಿಗಳಾದ ಪಟ್ಟಣದ ದರ್ಶನ್, ತಿಲಕ್, ಹರ್ಷವರ್ಧನ, ಮಹಮದ್ ಖಲೀಲ್ ಮತ್ತು ತಾಲ್ಲೂಕಿನ ವಿವಿಧ ಗ್ರಾಮಗಳ ಚಂದ್ರಮೋಹನ, ಮನು, ಪ್ರೀತಂ, ತಿಪಟೂರಿನ ರಾಕೇಶ್ ಹಾಗು ತಾಲ್ಲೂಕು ಅಬಕಾರಿ ಇಲಾಖೆಯ ಪೊಲೀಸರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆ ಗ್ರಾಮದ ನರೇಶ್ ಜಿ.ಎಚ್ ಬಂಧಿಸಿದ್ದಾರೆ.
ತಹಶೀಲ್ದಾರ್ ಎನ್.ಎ. ಕುಂಞ ಅಹಮದ್ ಮತ್ತು ತುರುವೇಕೆರೆ ಸಿಪಿಐ ಲೋಹಿತ್ ಅವರು ಗಾಂಜಾದಂತಹ ಮಾದಕ ವಸ್ತುಗಳ ವ್ಯಸನಕ್ಕೆ ಯುವಕರು ಬಲಿಯಾಗಬಾರದು ಮತ್ತು ತಾಲ್ಲೂಕಿನಲ್ಲಿ ಗಾಂಜಾ ಮಾರಾಟ ಜಾಲವನ್ನು ಬುಡ ಸಮೇತ ಕಿತ್ತು ಹಾಕಬೇಕೆಂದು ಗಂಭೀರವಾಗಿ ಕ್ರಮ ತೆಗೆದುಕೊಂಡ ಹಿನ್ನೆಲೆಯಲ್ಲಿ ಸಿಪಿಐ ಲೋಹಿತ್ ಅವರು ಪಿಎಸ್ಐಗಳಾದ ಪಾಂಡು ಮತ್ತು ಚಿತ್ತರಂಜನ್ ಅವರ ತಂಡ ರಚಿಸಿದರು. ಈ ತಂಡ ನ. 21 ರಿಂದಲೇ ಗಾಂಜಾ ಮಾರಾಟ ಜಾಲ ಪತ್ತೆಗೆ ಕಾರ್ಯಾಚರಣೆ ನಡೆಸಿತ್ತು.
ಪಕ್ಕದ ತಾಲ್ಲೂಕುಗಳಿಂದ ತುರುವೇಕೆರೆ ಪಟ್ಟಣಕ್ಕೆ ಗಾಂಜಾ ಮಾರಾಟ ಮಾಡಲು ಬಂದು ಸಿಕ್ಕಿ ಬಿದ್ದ ಆರೋಪಿಗಳೇ ಹೆಚ್ಚಿದ್ದು ಅವರುಗಳ ಮಾಹಿತಿಯನ್ನಾಧರಿಸಿಯೇ ತುರುವೇಕೆರೆ ಗಾಂಜಾ ಪೊಲೀಸ್ ತಂಡ ಇತ್ತೀಚೆಗೆ ಬೇರೆ ಬೇರೆ ತಾಲ್ಲೂಕುಗಳಿಗೆ ಹೋಗಿ ಅಲ್ಲಿನ ಆರೋಪಿಗಳನ್ನು ಬಂಧಿಸಿ ಕರೆತರುತ್ತಿದ್ದಾರೆ. ಬಂಧಿತ ಆರೋಪಿಗಳಿಂದ ಸುಮಾರು 1 ಕೆ.ಜಿಗೂ ಹೆಚ್ಚಿನ ಗಾಂಜಾ ಸೊಪ್ಪು ಮತ್ತು ಇನ್ನಿತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಇದೊಂದು ದೊಡ್ಡ ಜಾಲವಾಗಿದ್ದು ಇನ್ನೂ ಸಾಕಷ್ಟು ಆರೋಪಿಗಳು ಸಿಗುವ ಸಾದ್ಯತೆ ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವರದಿ: ಗಿರೀಶ್ ಕೆ ಭಟ್