ಬೆಂಗಳೂರು: ತಾಂತ್ರಿಕ ಕಾರಣದಿಂದಾಗಿ 1000 ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಸ್ಥಗಿತಗೊಂಡಿತ್ತು. ಈಗ ಸಮಸ್ಯೆ ಸರಿ ಪಡಿಸಿರುವಂತ ಕೆಇಎ ಮತ್ತೆ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪುನರಾರಂಭಿಸಲಾಗಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ದಿನಾಂಕ 20.02.2024 ರಂದು ವಿವರವಾದ ಅಧಿಸೂಚನೆಯನ್ನು ಪ್ರಕಟಿಸಲಾಗಿರುತ್ತದೆ ಎಂದಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆಯಲ್ಲಿ ದಿನಾಂಕ 03.04.2024 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿರುತ್ತದೆ. ಆದರೆ ಆನ್ಲೈನ್ ಅರ್ಜಿಯಲ್ಲಿ ಕೆಲವು ಬದಲಾವಣೆಯ ಕಾರಣ ಅರ್ಜಿಯನ್ನು ಸಲ್ಲಿಸಲು ದಿನಾಂಕವನ್ನು ಮುಂದೂಡಲಾಗಿದೆ ಎಂದು ದಿನಾಂಕ 07.03.2024 ರಂದು ಪ್ರಕಟಣೆ ಹೊರಡಿಸಿ ತಿಳಿಸಲಾಗಿರುತ್ತದೆ. ಇದೀಗ http://kea.kar.nic.in ಲಿಂಕ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
ದಿನಾಂಕ 05-04-2024ರ ಇಂದಿನಿಂದ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳ ನೇಮಕಾತಿಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಗೊಳ್ಳಲಿದೆ. ದಿನಾಂಕ 04-05-2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ದಿನಾಂಕ 07-05-2024 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನವಾಗಿದೆ ಎಂದು ಮಾಹಿತಿ ಹಂಚಿಕೊಂಡಿದೆ.