ನವದೆಹಲಿ: ದೇಶಾದ್ಯಂತ ಲೋಕಸಭಾ ಚುನಾವಣೆಯ ಬಗ್ಗೆ ವಾತಾವರಣ ಬಿಸಿಯಾಗಿದೆ. ಚುನಾವಣೆಯಲ್ಲಿ ಗೆಲ್ಲಲು ಅಭ್ಯರ್ಥಿಗಳು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಈನಡುವೆ ಉತ್ತರ ಪ್ರದೇಶದ ಅಲಿಗಢದ ಅಭ್ಯರ್ಥಿಯೊಬ್ಬರು ಎಲ್ಲರೂ ಆಶ್ಚರ್ಯಚಕಿತರಾಗುವಂತಹ ಕೆಲಸವನ್ನು ಮಾಡಿದ್ದಾರೆ.
ಯಾರನ್ನಾದರೂ ಶಿಕ್ಷಿಸಲು ಅಥವಾ ಅವಮಾನಿಸಲು ಚಪ್ಪಲಿಗಳ ಹಾರವನ್ನು ಹಾಕುವುದನ್ನುನಾವು ನೀವು ಆಗಾಗ್ಗೆ ನೋಡಿರಬಹುದು. ಆದರೆ ಅಲಿಗಢ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪಂಡಿತ್ ಕೇಶವ್ ದೇವ್ ಗೌತಮ್ ಅವರು ಚಪ್ಪಲಿ ಹಾರ ಧರಿಸಿ ಪ್ರಚಾರ ಆರಂಭಿಸಿದ್ದಾರೆ. ಹೂವಿನ ಹಾರದ ಬದಲು ಚಪ್ಪಲಿ ಹಾರ ಧರಿಸಿ ಮತಯಾಚಿಸುತ್ತಿರುವುದು ಕಂಡುಬಂತು, ಇದನ್ನು ನೋಡಿ ಎಲ್ಲರೂ ಆಶ್ಚರ್ಯಚಕಿತರಾಗಿದ್ದಾರೆ.
ಪಂಡಿತ್ ಕೇಶವ್ ದೇವ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚಪ್ಪಲಿ ಚುನಾವಣಾ ಚಿಹ್ನೆಯನ್ನು ಪಡೆದಿದ್ದಾರೆ. ಕೇಶವ್ ದೇವ್ ಸ್ವತಃ ಚಪ್ಪಲಿ ಚುನಾವಣಾ ಚಿಹ್ನೆಗಾಗಿ ಅರ್ಜಿ ಸಲ್ಲಿಸಿದ್ದರು, ನಂತರ ಅವರು ತಮ್ಮ ಕುತ್ತಿಗೆಗೆ 7 ಚಪ್ಪಲಿಗಳ ಹಾರವನ್ನು ನೇತುಹಾಕುವ ಮೂಲಕ ಪ್ರಚಾರ ನಡೆಸುತ್ತಿದ್ದಾರೆ. ಭ್ರಷ್ಟಾಚಾರವನ್ನು ವಿರೋಧಿಸುವ ಬಗ್ಗೆಯೂ ಅವರು ಚರ್ಚೆಯಲ್ಲಿದ್ದಾರೆ.