ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಜಾರಕಿಹೊಳಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅಥಣಿ ಶಾಸಕ ಲಕ್ಷ್ಮಣ ಸವದಿ , ಪ್ರಿಯಾಂಕಾ ಕನಿಷ್ಟ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ಕ್ಷೇತ್ರದಲ್ಲಿ ಗ್ರಾಮಪಂಚಾಯಿತಿ ಹಿಡಿದು ಎಲ್ಲ ಹಂತದ ಮತದಾರರ ಜೊತೆ ಸಭೆ ನಡೆಸಲಿದ್ದೇವೆ ಎಂದು ಹೇಳಿದ ಸವದಿ, ಮತದಾರ ಈಗ ಬದಲಾಗಿದ್ದಾನೆ, ಮೊದಲೆಲ್ಲ ಅವನು ರಾಜಕೀಯ ನಾಯಕರು ಹೇಳುವುದನ್ನೆಲ್ಲ ನಂಬುತ್ತಿದ್ದ, ಆದರೆ ಈಗ ಪ್ರಜ್ಞಾವಂತನಾಗಿದ್ದಾನೆ, ಯಾವುದು ಸರಿ ಯಾವುದು ತಪ್ಪು ಅಂತ ವಿವೇಚಿಸುವ ಶಕ್ತಿ ಅವನಲ್ಲಿದೆ ಎಂದರು.
ರಾಜ್ಯ ಸರ್ಕಾರ ಜಾರಿಗೊಳಿಸಿರುವ 5 ಗ್ಯಾರಂಟಿ ಯೋಜನೆಗಳು ನಿಶ್ಚಿತವಾಗಿಯೂ ಕಾಂಗ್ರೆಸ್ ಪಕ್ಷದ ಕೈ ಹಿಡಿಯಲಿವೆ, ಈ ತುಟ್ಟಿಗಾಲದಲ್ಲಿ ಅವು ಮಹಿಳೆಯರ ಬದುಕನ್ನು ನಿರಾಳಗೊಳಿಸಿವೆ, ಅವರ ತೊಂದರೆ, ಸಮಸ್ಯೆಗಳು ಕಡಿಮೆಯಾಗಿವೆ, ರಾಜ್ಯದ ಮಹಿಳಾ ಮತದಾರರ ಪೈಕಿ ಶೇಕಡಾ 90ರಷ್ಟು ಜನ ಕಾಂಗ್ರೆಸ್ ಪರ ಮತ ಚಲಾಯಿಸಲಿದ್ದಾರೆ ಎಂದು ಸವದಿ ಹೇಳಿದರು.
ರಾಜ್ಯದಲ್ಲಿ ಜನ ಗ್ಯಾರಂಟಿ ಯೋಜನೆಗಳಿಂದ ಅಗಿರುವ ಪ್ರಯೋಜನಗಳಿಂದ ಸಂತುಷ್ಟರಾಗಿರುವುದನ್ನು ಕಂಡು ಹಲುಬುತ್ತಿರುವ ವಿರೋಧ ಪಕ್ಷಗಳ ನಾಯಕರು ಲೋಕಸಭಾ ಚುನಾವಣೆ ಬಳಿಕ ಅವು ನಿಲ್ಲುತ್ತವೆ ಅಂತ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ ಸವದಿ ಹೇಳಿದರು.