ಸಿರುಗುಪ್ಪ : –ನಗರದ ಜೆ.ಎಮ್.ಎಫ್.ಸಿ ನ್ಯಾಯಾಲಯದ ಆವರಣದೊಳಗಿರುವ ತಾಲೂಕು ವಕೀಲರ ಸಂಘದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ವಿಶ್ವ ಭೂಮಿ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಹಾಜಿ ಹುಸೇನ್‌ಸಾಬ್ ಯಾದವಾಡ ಅವರು ಸಸಿಗೆ ನೀರೆರೆದು ಉದ್ಘಾಟಿಸಿದರು.
ಪ್ಯಾನಲ್ ವಕೀಲ ಎನ್.ಅಬ್ದುಲ್‌ಸಾಬ್ ಅವರು ಮಾತನಾಡಿ ಭೂಮಿಯೆಂದರೆ ಕೇವಲ ಮಣ್ಣು ಮಾತ್ರವಲ್ಲದೇ ನದಿ, ಪರ್ವತ, ಸಮುದ್ರ, ಅರಣ್ಯ, ಅನಿಲ ಹಾಗೂ ಖನಿಜ ಸಂಪತ್ತಿನಿಂದ ಕೂಡಿದೆ. ತನ್ನ ಸ್ವಾರ್ಥಕ್ಕಾಗಿ ಮಾನವನು ಸ್ವಯಂಕೃತ ಅಪರಾಧಕ್ಕೆ ಮುಂದಾಗಿದ್ದು, ಮಿತಿಮೀರಿ ಪರಿಸರ ಮಾಲಿನ್ಯದಿಂದಾಗಿ ಇಂದು ನೀರಿಗಾಗಿ ಪರದಾಡುವಂತಾಗಿದೆ.
ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಕೃಷಿಭೂಮಿಯೂ ಮಾಯವಾಗುತ್ತಿದೆ. ಮುದೊಂದು ದಿನ ಬರೀ ನೀರು ಮಾತ್ರವಲ್ಲ ಆಹಾರಕ್ಕಾಗಿಯೂ ಪರದಾಡುವಂತಹ ಕಾಲ ಸನ್ನಿಹವಾಗಲಿದೆ.
ಆದ್ದರಿಂದ ನಾವೆಲ್ಲಾ ನೈಸರ್ಗಿಕ ಮಾಲಿನ್ಯವನ್ನು ತಡೆಯುವುದರೊಂದಿಗೆ ಭೂಮಿ ಮೇಲಿನ, ನೆಲ, ಜಲ, ವಾಯುಮಾಲಿನ್ಯವನ್ನು ತಡೆಯಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆಂದರು.
ವಕೀಲರಾದ ವೆಂಕೋಬ ಅವರು ಮಾತನಾಡಿ ಇಡೀ ಜೀವ ಸಂಕುಲದ ಒಳಿತಿಗಾಗಿ ಭೂಮಿಯ ಪರಿಶುದ್ದತೆಯನ್ನು ಹೆಚ್ಚಿಸಬೇಕೆಂದರೆ ನಾವೆಲ್ಲಾ ಮರಗಿಡಗಳನ್ನು ನೆಡಬೇಕು. ಪ್ರಕೃತಿ ನಮಗೆ ದೇವರು ಕೊಟ್ಟ ವರದಾನವಾಗಿದೆಂದರು.
ಇದೇ ವೇಳೆ ಸರ್ಕಾರಿ ಸಹಾಯಕ ಅಭಿಯೋಜಕಿ ಶಾರದ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಎಸ್.ಮಂಜುನಾಥಗೌಡ, ಕಾರ್ಯದರ್ಶಿ ಹೆಚ್.ಪ್ಯಾಟೆಗೌಡ, ಪ್ಯಾನಲ್ ವಕೀಲರಾದ ಮಲ್ಲಿಗೌಡ, ವೆಂಕಟೇಶ್ ನಾಯ್ಕ್, ಕೆ.ಸಣ್ಣ ಹುಸೇನ್, ಹಿರಿಯ ವಕೀಲರಾದ ಪತ್ತಾರ್ ವೀರಣ್ಣ, ಎಸ್.ಶ್ರೀನಿವಾಸ, ಸಿದ್ದಲಿಂಗಯ್ಯ ಹಾಗೂ ಸಾರ್ವಜನಿಕರು ಇದ್ದರು.
ವರದಿ.ಶ್ರೀನಿವಾಸ ನಾಯ್ಕ