ಹಾವೇರಿ: ದೇಶಕ್ಕೆ ಸಾಮಾಜಿಕ ನ್ಯಾಯ ಕೊಟ್ಟವರು ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು, ಅವರ ಯೋಜನೆಯನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ. ಅಂಬೇಡ್ಕರ್ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭೆ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಅವರು ಇಂದು ಹಿರೆಕೆರೂರು ವಿಧಾನಸಭಾ ಕ್ಷೇತ್ರದ ಮಕರಿ, ನಾಗವಂದ ಗ್ರಾಮಗಳಲ್ಲಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಕಾಂಗ್ರೆಸ್ ನವರು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಅವರು ಸಂಸತ್ತಿಗೆ ಬರದಂತೆ ನೋಡಿಕೊಂಡಿದ್ದರು. ಅವರು ನಿಧನರಾದಾಗ ದೆಹಲಿಯಲ್ಲಿ ಅವರ ಅಂತ್ಯ ಸಂಸ್ಕಾರಕ್ಕೆ ಆರು ಅಡಿ ಜಾಗವನ್ನೂ ಕಾಂಗ್ರೆಸ್ ಕೊಡಲಿಲ್ಲ. ಈಗ ಅಂಬೇಡ್ಕರ ಬಗ್ಗೆ ಮಾತನಾಡುತ್ತಾರೆ. ಅವರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ನವರಿಗೆ ಇಲ್ಲ ಎಂದು ಹೇಳಿದರು.
ಎಸ್ಸಿ ಎಸ್ಟಿ ಸುಮದಾಯಕ್ಕೆ ಕಾಂಗ್ರೆಸ್ ಯಾವುದೇ ಸಾಮಾಜಿಕ ನ್ಯಾಯ ನೀಡಿಲ್ಲ. ರಾಜ್ಯದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಮೂವತ್ತು ವರ್ಷದಿಂದ ಬೇಡಿಕೆ ಇದ್ದರೂ ಯಾರೂ ಮಾಡಿರಲಿಲ್ಲ. ನನಗೂ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಹೇಳಿದರು.
ನನಗೆ ಜೇನು ಕಡಿದರೂ ಆ ಸಮುದಾಯಗಳಿಗೆ ನ್ಯಾಯ ಕೊಡುತ್ತೇನೆ ಎಂದು ಎಸ್ಟಿಗೆ 3% ರಿಂದ ಶೇ 7% ಕ್ಕೆ ಹೆಚ್ಚಿಸಿದ್ದೇವೆ. ಎಸ್ಸಿ ಸಮುದಾಯಕ್ಕೆ 15% ರಿಂದ ಶೇ 17% ಕ್ಕೆ ಹೆಚ್ಚಳ ಮಾಡಿದ್ದೇನೆ. ಅದನ್ನು ಸಂವಿಧಾನದ ಸೆಡ್ಯೂಲ್ 9ರಲ್ಲಿ ಸೇರಿಸುವಂತೆ ಕೇಳುತ್ತಿದ್ದಾರೆ.
ಅದಕ್ಕೂ ಮೊದಲೇ ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಜಾರಿಯಾಗಿದ್ದು, ಇದರಿಂದ ಎಸ್ಟಿ ಸಮುದಾಯದ ಸುಮಾರು 400 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೀಸಲಾತಿ ಅಡಿ ಮೆಡಿಕಲ್ ಸೀಟು ದೊರೆತಿದೆ. ಸುಮಾರು ನಾಲ್ಕು ಸಾವಿರ ಇಂಜನೀಯರಿಂಗ್ ಹೆಚ್ಚಿಗೆ ಸೀಟು ದೊರೆತಿವೆ ಎಂದು ಹೇಳಿದರು