ಕಲಬುರಗಿ: ಸುಪ್ರೀಂ ಕೋರ್ಟಿನ ಸೂಚನೆಯ ಮೇರೆಗೆ ಕೇಂದ್ರ ಸರ್ಕಾರ 3464 ಕೋಟಿ ರೂ. ಬರ ಪರಿಹಾರ ನೀಡುತ್ತಿದ್ದು, ಇದು ರಾಜ್ಯ ಸರ್ಕಾರ ಸಲ್ಲಿಸಿದ ಮನವಿಯ ಕಾಲು ಭಾಗವೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ಕಲಬುರಗಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.ಕೇಂದ್ರದಿಂದ ರಾಜ್ಯಕ್ಕೆ ಬರಪರಿಹಾರ ಬಿಡುಗಡೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ರಾಜ್ಯ 18,172 ಕೋಟಿ ರೂ.ಪರಿಹಾರ ಕೇಳಿದ್ದೇವೆ, 35 ಸಾವಿರ ಕೋಟಿ ರೂ. ಬೆಳೆ ನಷ್ಟವಾಗಿದ್ದು, 48 ಲಕ್ಷ ಹೆಕ್ಟೆರ್ ಪ್ರದೇಶದಲ್ಲಿ ಬೆಳೆನಷ್ಟವಾಗಿದೆ. ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ವಿತ್ತ ಮಂತ್ರಿ ನಿರ‍್ಮಲಾ ಸೀತಾರಾಂ ಅವರು ರಾಜ್ಯ ವಿಳಂಬವಾಗಿ ಮನವಿ ಸಲ್ಲಿಸಿದೆ ಎಂದು ಸುಳ್ಳು ಹೇಳಿದ್ದಾರೆ ಎಂದರು.
ಆಮೇಲೆ ನಿರ್ಮಲಾ ಸೀತಾರಾಮನ್ ಅವರು ಇವರು ಬರಗಾಲಕ್ಕೆ ಮನವಿ ಕೊಟ್ಟಿಲ್ಲ, ಗ್ಯಾರಂಟಿಗಳಿಗೆ ಹಣ ಕೇಳಿದ್ದಾರೆ ಎಂದರು. ನಾವು ಗ್ಯಾರಂಟಿಗಳಿಗೆ ಒಂದು ಪೈಸವೂ ಕೇಳಿಲ್ಲ, ಕೇಳೋದೂ ಇಲ್ಲ. ಇಬ್ಬರೂ ಸುಳ್ಳು ಹೇಳಿದರು ಎಂದು ಸ್ಪಷ್ಟ ಪಡಿಸಿದರು.