ಬೆಂಗಳೂರು: ರಾಜ್ಯದ ಸುಮಾರು 34 ಲಕ್ಷ ರೈತರಿಗೆ ಡಿಬಿಟಿ ಮೂಲಕ ಇಂದಿನಿಂದಲೇ ಬೆಳೆ ನಷ್ಟ ಪರಿಹಾರ ವಿತರಿಸಲಾಗುವುದು. ಇನ್ನೂ 3-4 ದಿನಗಳಲ್ಲಿ ಎಲ್ಲಾ ರೈತರ ಖಾತೆಗೆ ಬೆಳೆ ನಷ್ಟ ಪರಿಹಾರ ಜಮಾ ಆಗಲಿದೆ.
ಕೇಂದ್ರದಿಂದ ಬಂದಿರುವ 3454 ಕೋಟಿ ರೂ. ಇನ್ ಪುಟ್ ಸಬ್ಸಿಡಿಗೆ ಪೂರ್ಣ ಬಳಕೆ ಮಾಡಿಕೊಳ್ಳಲು ಸರ್ಕಾರ ನಿರ್ಧರಿಸಿದೆ.
ಈಗಾಗಲೇ ರೈತರಿಗೆ ವಿತರಿಸಿದ ಗರಿಷ್ಠ 2000 ರೂ.ವರೆಗಿನ ಪರಿಹಾರ ಮೊತ್ತ ಕಡಿತ ಮಾಡಿಕೊಂಡು ಬಾಕಿ ಮೊತ್ತವನ್ನು ಡಿಬಿಟಿ ಮೂಲಕ ರೈತರ ಖಾತೆಗೆ ಜಮಾ ಮಾಡಲಾಗುತ್ತದೆ.
ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ ಖುಷ್ಕಿ, ನೀರಾವರಿ, ತೋಟಗಾರಿಕೆ ಬೆಳೆಗಳಿಗೆ ನಿಗದಿಯಾದ ಮೊತ್ತವನ್ನು ಅರ್ಹ ಫಲಾನುಭವಿ ರೈತರ ಖಾತೆಗೆ ಜಮಾ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಶುಕ್ರವಾರ ಮೊದಲಿಗೆ 15 ಲಕ್ಷ ರೈತರ ಖಾತೆಗೆ ಪರಿಹಾರ ಮೊತ್ತ ಜಮಾ ಮಾಡಲಾಗುತ್ತದೆ. ಬಳಿಕ ಉಳಿದ ರೈತರಿಗೆ ಮೂರ್ನಾಲ್ಕು ದಿನಗಳಲ್ಲಿ ಪರಿಹಾರ ಹಣ ತಲುಪಲಿದೆ ಎಂದು ಹೇಳಲಾಗಿದೆ.
ಕೇಂದ್ರದಿಂದ ಬಂದಿರುವ ಪರಿಹಾರ ಮೊತ್ತವನ್ನು ರೈತರ ಖಾತೆಗೆ ಜಮಾ ಮಾಡಲು ಚುನಾವಣಾ ಆಯೋಗದಿಂದ ಒಪ್ಪಿಗೆ ಪಡೆಯಲಾಗಿದ್ದು, ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆ ನಷ್ಟ ಪರಿಹಾರಕ್ಕೆ ಅರ್ಹರಾಗಿದ್ದ ರೈತರ ಖಾತೆಗೆ ಹಣ ಜಮಾ ಮಾಡಲಾಗುವುದು.