ಬೆಳಗಾವಿ: ಕಾಂಗ್ರೆಸ್ ಸರ್ಕಾರ ಕೇವಲ ಒಂದು ರೂಪಾಯಿಗೆ ಜಮೀನು ನೀಡಿದ್ದರಿಂದ ಕೆಎಲ್‌ಇ ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯ ಬೆಳೆದಿದೆ ಎಂಬ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿಕೆಯನ್ನು ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತೀವ್ರವಾಗಿ ಖಂಡಿಸಿದ್ದಾರೆ.
ಗುರುವಾರ ಕೆಎಲ್‌ಇ ವಿಶ್ವವಿದ್ಯಾಲಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರ ಪರ ಪ್ರಚಾರ ನಡೆಸಿದ ಲಕ್ಷ್ಮಿ ಹೆಬ್ಬಾಳ್ಕರ್ ಕಾಂಗ್ರೆಸ್ ಸರ್ಕಾರ ಕೇವಲ ಒಂದು ರೂಪಾಯಿಗೆ ಜಮೀನು ನೀಡಿದ್ದರಿಂದ ಕೆಎಲ್‌ಇ ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯ ಬೆಳೆದಿದೆ ಎಂದು ಹೇಳಿದ್ದು, ಅವರ ಹೇಳಿಕೆಯನ್ನು ಪ್ರಭಾಕರ ಕೋರೆ ಖಂಡಿಸಿದ್ದಾರೆ.
ಸಚಿವರು ಕೆಲ್‌ಇ ಸಂಸ್ಥೆಯ ಇತಿಹಾಸ ಅರಿಯದೇ ಬಾಲಿಶ ಹೇಳಿಕೆ ನೀಡುವುದು ತರವಲ್ಲ. ಅವರು ಬಹಿರಂಗ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದಾರೆ.
108 ವರ್ಷಗಳ ಇತಿಹಾಸ ಹೊಂದಿರುವ ಕೆಎಲ್‌ಇ ಸಂಸ್ಥೆ ದಾನಿಗಳು, ಮಹಾದಾನಿಗಳಿಂದ, ಶಿರಸಂಗಿ ಲಿಂಗರಾಜರು, ರಾಜ ಲಖಮಗೌಡರು, ಭೂಮರಡ್ಡಿ ಬಸಪ್ಪನವರಂತಹ ತ್ಯಾಗವೀರರಿಂದ ಇಷ್ಟು ವಿಸ್ತಾರವಾಗಿ ಬೆಳೆದಿದೆ, ಕಾಂಗ್ರೆಸ್ಮ ಬಿಜೆಪಿ ಪಕ್ಷಗಳ ಪ್ರಶ್ನೆ ಇಲ್ಲಿ ಉದ್ಭವಿಸುವುದಿಲ್ಲ, ಸಂಸ್ಥೆ ಸ್ವಂತ ಹಣದಲ್ಲಿ ಆಸ್ತಿಗಳನ್ನು ಖರೀದಿಸಿದೆ, ಆಯಾ ಕಾಲಘಟ್ಟಗಳಲ್ಲಿದ್ದ ಪಕ್ಷಗಳಿಂದ ಸಹಾಯ ಸಹಕಾರ ಪಡೆದುಕೊಂಡಿದೆ. ಕೇವಲ ಕಾಂಗ್ರೆಸ್ ನಿಂದ ಕೆಎಲ್‌ಇ ಆಸ್ಪತ್ರೆ ನಿರ್ಮಿಸಿದೆ. ವಿವಿಗಳನ್ನು ಸ್ಥಾಪಿಸಿದೆ ಎನ್ನುವಂತಹ ಹೇಳಿಕೆ ನೀಡಿರುವುದು ದುರದೃಷ್ಟಕರ ಎಂದು ಪ್ರಭಾಕರ ಕೋರೆ ತಿಳಿಸಿದ್ದಾರೆ.
ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಸೇರಿದವರು, ಬೆಂಬಲಿಗರು ಇದ್ದಾರೆ. ಾಡಳಿತ ಮಂಡಳಿಯವರು ಯಾವುದೇ ರಾಜಕೀಯ ಪಕ್ಷಕ್ಕೆ ಅಂಟಿಕೊಂಡಿಲ್ಲ. ಶಿಕ್ಷಣ ಸಂಸ್ಥೆಯಲ್ಲಿ ನಾವು ರಾಜಕೀಯ ತರುವುದಿಲ್ಲ. ಅದರ ಬೆಳವಣಿಗೆಗಾಗಿ ಎಲ್ಲರ ಸಹಕಾರ ಪಡೆಯುತ್ತೇವೆ.
ಈ ನೆಲದ ಶಿಕ್ಷಣ ಸಂಸ್ಥೆಗಳ ನೈಜ ಇತಿಹಾಸವನ್ನು ಲಕ್ಷ್ಮಿ ಹೆಬ್ಬಾಳ್ಕರ್ ಅರಿತುಕೊಂಡಂತೆ ಕಾಣುವುದಿಲ್ಲ. ಮತ ಬೇಟೆಗಾಗಿ ಸುಳ್ಳು ಹೇಳಿಕೆ ನೀಡಿ ಜನರ ಭಾವನೆಗಳೊಂದಿಗೆ ಆಟವಾಡುವುದು ಕಾಂಗ್ರೆಸ್ ಗೆ ತರವಲ್ಲ. ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮ ಹೇಳಿಕೆ ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಹೇಳಿದ್ದಾರೆ.