ಸಿರುಗುಪ್ಪ : -ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾರ್ಯ ನಿರ್ವಹಿಸುತ್ತಿರುವ ಮೇಟಿಗಳಿಗೆ ಭದ್ರತೆ ಮತ್ತು ದಿನಗೂಲಿ ನಿಗದಿಪಡಿಸುವಂತೆ ಒತ್ತಾಯಿಸಿ ಅಖಿಲ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರ ಸಂಘದಿಂದ ತಾಲೂಕಿನ ಮಾಳಾಪುರ ಗ್ರಾಮದಲ್ಲಿನ ಕೆರೆಯಲ್ಲಿ ಉದ್ಯೋಗ ಖಾತ್ರಿಯ ಸ್ಥಳಕ್ಕೆ ಆಗಮಿಸಿದ ತಾಂತ್ರಿಕ ಸಂಯೋಜಕ ಪ್ರದೀಪ್ ಅವರ ಮೂಲಕ ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಂಘದ ತಾಲೂಕಾಧ್ಯಕ್ಷ ಇ.ಆರ್.ಯಲ್ಲಪ್ಪ ಮಾತನಾಡಿ ಕೆಂಚನಗುಡ್ಡ, ನಡಿವಿ, ಸಿರಿಗೇರಿ, ಎಮ್.ಸೂಗೂರು, ಮುದ್ದಟನೂರು ಗ್ರಾಮ ಪಂಚಾಯಿತಿಗಳಿಗೆ ಒಳಪಡುವ ಹಳ್ಳಿಗಳ ಕೂಲಿಕಾರರು ಕೂಲಿಗಾಗಿ 20-25 ಕಿ.ಮೀ. ದೂರ ಬರಬೇಕಾದ ಅನಿವಾರ್ಯತೆಯಿದೆ.
ಆದರೆ ಸಂಬಂದಿಸಿದ ಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳು ವಾಹನ ಸೌಲಭ್ಯ ಒದಗಿಸುತ್ತಿಲ್ಲವಾದ್ದರಿಂದ ಕೂಲಿಕಾರರಿಗೆ ಸಮಸ್ಯೆಯಾಗುತ್ತಿದ್ದು, ಆಯಾ ಗ್ರಾಮದಲ್ಲೇ ಉದ್ಯೋಗ ನೀಡಬೇಕೆಂದರು.
ಮುಖಂಡ ಸುರೇಶ ಮಾತನಾಡಿ ಈಗಾಗಲೇ ಮೇಟಿಗಳಿಂದ ಒಪ್ಪಿಗೆ ಪತ್ರ ಬರೆಸಿಕೊಂಡಿರುವ ಬಗ್ಗೆ ಸರ್ಕಾರದ ಆದೇಶವಿದ್ದಲ್ಲಿ ಅದರ ಪ್ರತಿ ಮೇಟಿಗಳಿಗೆ ನೀಡಬೇಕು.
ಕೆಲಸದ ಸ್ಥಳದಲ್ಲಿ ಕುಡಿಯಲು ಶುದ್ದ ನೀರು, ಬಿಸಿಲಿನ ತಾಪಕ್ಕೆ ಬಳಲಿದವರಿಗೆ ನೆರಳು ಮತ್ತು ವೈದ್ಯಾಧಿಕಾರಿಗಳ ತಪಾಸಣೆ ವ್ಯವಸ್ಥೆ ಕಲ್ಪಿಸಬೇಕು.
ಖಾತ್ರಿ ಕಾರ್ಮಿಕರಿಗೆ ಕನಿಷ್ಟ ವೇತನ 600ಕ್ಕೇರಿಸಬೇಕು. ರಾಜ್ಯದಲ್ಲಿ ಬರಗಾಲ ಛಾಯೆಯಿರುವುದರಿಂದ ನಮೂನೆ-6 ಅರ್ಜಿ ಸಲ್ಲಿಸಿದ ಪ್ರತಿ ಕುಟುಂಬಕ್ಕೆ 150 ದಿನಗಳ ಕೆಲಸ ನೀಡಬೇಕೆಂದರು.
ಇದೇ ವೇಳೆ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ಸಂಯೋಜಿತ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಮುಖಂಡರಾದ ಬಿ.ಗಂಗಾಧರ, ಕಾರೆಕಾಯಿ ವೀರೇಶ, ಎಮ್.ಅಡಿವೆಪ್ಪ, ಹೆಚ್.ತಿಮ್ಮಪ್ಪ, ತಿರುಮಲೇಶ ನಾಯಕ್, ಬಿ.ರಾಮಪ್ಪ, ಇನ್ನಿತರರು ಇದ್ದರು.
ವರದಿ. ಶ್ರೀನಿವಾಸ ನಾಯ್ಕ