ಸಿರುಗುಪ್ಪ : -ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಗರದ ವಿವೇಕಾನಂದ ಪಬ್ಲಿಕ್ ಶಾಲೆಯ ಆವರಣದಲ್ಲಿ ಸೋಮವಾರ ಮಸ್ಟರಿಂಗ್ ಕಾರ್ಯ ಯಶಸ್ವಿಯಾಗಿ ಜರುಗಿತು.
ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ವ್ಯಾಪ್ತಿಗೆ ಬರುವ ಸಿರುಗುಪ್ಪ ವಿಧಾನಸಭೆ ಎಸ್.ಟಿ.ಮೀಸಲು ಕ್ಷೇತ್ರದ ಮತಗಟ್ಟೆಗಳಿಗೆ ಮತಯಂತ್ರಗಳು, ಅಗತ್ಯ ಪರಿಕರಗಳು, ಹಾಗೂ ಚುನಾವಣಾ ಸಿಬ್ಬಂದಿ ನಿಯೋಜನಾ ಕಾರ್ಯ ಜರುಗಿತು.
ಮತಗಟ್ಟೆಯಲ್ಲಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮತಗಟ್ಟೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಸಹಾಯಕ ಚುನಾವಣಾಧಿಕಾರಿ ಡಾ.ತಿರುಮಲೇಶ ಅವರು ಸೂಚನೆ ನೀಡಿದರು.
ಮತದಾನಕ್ಕೆ ಕೇವಲ ಒಂದು ದಿನ ಬಾಕಿಯಿದ್ದು, ಎಲ್ಲವೂ ಸುಸೂತ್ರವಾಗಿ ನಡೆಯಲು ಚುನಾವಣಾ ಆಯೋಗ, ಜಿಲ್ಲಾ ಮತ್ತು ತಾಲೂಕಾಡಳಿತದಿಂದ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿದೆಂದರು.
ತಹಶೀಲ್ದಾರ್ ಶಂಷಾಲಂ ಸುದ್ದಿಗಾರರೊಂದಿಗೆ ಮಾತನಾಡಿ ತಾಲೂಕಿನ ಗ್ರಾಮೀಣ ವ್ಯಾಪ್ತಿಯ 114 ಹಾಗೂ ಪಟ್ಟಣ ಹಾಗೂ ನಗರ ಸೇರಿದಂತೆ 43 ಸೇರಿ ಒಟ್ಟು 228 ಮತಗಟ್ಟೆಗಳಲ್ಲಿ 1051 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಚುನಾವಣಾ ಕಾರ್ಯಕ್ಕೆಂದು 34 ಕೆ.ಎಸ್.ಆರ್.ಟಿ.ಸಿ ಬಸ್ಸುಗಳು, 17 ಶಾಲಾ ಮಿನಿ ಬಸ್ಸುಗಳು, ಹಾಗೂ 10 ಟ್ರ್ಯಾಕ್ಸ್ ಗಳ ಮೂಲಕ ಮತಗಟ್ಟೆಗಳಿಗೆ ತಲುಪಿಸಲಾಗುತ್ತಿದೆಂದು ತಿಳಿಸಿದರು.
ಬಿರು ಬಿಸಿಲಿನಿಂದಾಗಿ ಮರಗಿಡಗಳ ನೆರಳಿನಲ್ಲಿ ಸಿಬ್ಬಂದಿಗಳು ಮತದಾನಕ್ಕೆ ಅಗತ್ಯವಿರುವ
ಯಂತ್ರಗಳು, ಇನ್ನಿತರ ಪರಿಕರಗಳನ್ನು ಜೋಡಿಸಿಕೊಂಡು ತಮ್ಮ ವಾಹನಗಳತ್ತ ತೆರಳುತ್ತಿರುವ ದೃಶ್ಯ ಕಂಡುಬಂದಿತು.
ವರದಿ ಶ್ರೀನಿವಾಸ ನಾಯ್ಕ