ಧಾರವಾಡ : ಬೆಂಕಿಯನ್ನು ದೇವರು ಅಂತಿರಲ್ಲ? ದೇವರು ಎಂದು ಅದರ ಜೊತೆ ಸ್ವಲ್ಪ ಹೊತ್ತು ಮಲಗುತ್ತೀರಾ? ಎಂದು ಸನಾತನ ಸಂಸ್ಕೃತಿ, ನಂಬಿಕೆ ಬಗ್ಗೆ ತೋಂಟದ ಶ್ರೀ ನಿಜಗುಣಾನಂದ ಸ್ವಾಮೀಜಿ ಪ್ರಶ್ನೆ ಮಾಡಿದ್ದಾರೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ‘ಬಸವಣ್ಣ-ಸಾಂಸ್ಕೃತಿಕ ನಾಯಕ’ ಕುರಿತಾದ ವಿಚಾರ ಸಂಕಿರಣದಲ್ಲಿ ಮಾತನಾಡಿರುವ ಶ್ರೀ ನಿಜಗುಣಾನಂದ ಸ್ವಾಮೀಜಿ, ಬಸವಣ್ಣನವರಿಗೆ ಎಲ್ಲಿಯೂ ಕೆಟ್ಟವರು ಕಾಣಲಿಲ್ಲ.
ಆತನ ಸಂಸ್ಕೃತಿ, ಸಂಸ್ಕಾರ ಯಾರಿಗೂ ಕೊಡಲು ಆಗುವುದಿಲ್ಲ. ಕಾಣುವ ಮನುಷ್ಯರನ್ನು ಪ್ರೀತಿ ಮಾಡಲಾರದವರು. ಕಾಣದೇ ಇರೋ ದೇವರನ್ನು ಪ್ರೀತಿ ಮಾಡಲು ಸಾಧ್ಯವೇ? ಎಂದು ಬಸವೇಶ್ವರರ ವಿಚಾರ ಹೇಳುತ್ತ ದೇವರ ಬಗ್ಗೆ ಪ್ರಶ್ನಿಸಿದ್ದಾರೆ.
ಪ್ರಾಣಿದಯವಾದ ಸಂಸ್ಕೃತಿ ಬಸವಣ್ಣನವರದ್ದು. ಹಬ್ಬ-ಹರಿದಿನಗಳಲ್ಲಿ ಕುರಿ, ಕೋಣ ತಂದಿಟ್ಟು ಕಡಿಯುತ್ತಿದ್ದರು. ಆಗ ಬಸವಣ್ಣ ಯಾವ ಸಂಸ್ಕೃತಿ ನಿಮ್ಮದು? ಎಂದು ಕೇಳಿದ್ದರು ದೇವರ ಹೆಸರಿನಲ್ಲಿ ಪ್ರಾಣಿ ವಧೆ ಮಾಡುವುದು ನಿಮ್ಮ ಸಂಸ್ಕೃತಿಯೇ? ದೇವರ ಹೆಸರಲ್ಲಿ ಹೋಮ ಮಾಡಿ ತಿನ್ನುವ ಪದಾರ್ಥ ಹಾಕುತ್ತಿರಲ್ಲ? ಏನಿದು ನಿಮ್ಮ ಸಂಸ್ಕೃತಿನಾ? ಎಂದು ಪ್ರಶ್ನಿಸಿದ್ದಾರೆ.
ಬೆಂಕಿಯನ್ನು ದೇವರು ಅಂತಿರಲ್ಲ. ದೇವರು ಅಂತಾ ಬೆಂಕಿಯ ಮೇಲೆ ಓಡ್ತಾರೆ. ಬೆಂಕಿಯನ್ನು ದೇವರು ಅಂತಾ ಓಡ್ತಿರಲ್ವಾ? ಸ್ವಲ್ಪ ಹೊತ್ತು ಮಲಗಿ ನೋಡೋಣಾ? ಬೆಂಕಿಯನ್ನು ದೇವರೆನ್ನುವುದು ನಿಮ್ಮ ಸಂಸ್ಕೃತಿಯಾ? ಬೆಂಕಿಗೆ ತುಪ್ಪ ಹಾಕುವುದು ನಿಮ್ಮ ಸಂಸ್ಕೃತಿಯಾ? ಜನರನ್ನು ಯಾವ ಜಾತಿ ಎಂದು ಕೇಳುವುದು ಸಂಸ್ಕೃತಿಯಾ? ಇದೆಲ್ಲವೂ ನನ್ನ ಮಾತಲ್ಲ. ಬಸವಣ್ಣನವರ ಹೇಳಿದ ಮಾತು. ಇದನ್ನು ಬಸವಣ್ಣ ಕೇಳಿದ್ದಾನೆ. ನಾ ಹೇಳಿದೆ ಅಂತಾ ನನ್ನ ಮೇಲೆ ಸಿಟ್ಟಾಗಬೇಡಿ ಎಂದರು.